ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಬರುವ ನಾಟಕೀಯತೆ, ಹಾಗು ವಿಶೇಷವಾದ ಪದ್ಯಗಳನ್ನು ಇಲ್ಲಿ ಕೊಡಲಾಗಿದೆ.
ಕುರುಕ್ಷೇತ್ರ ಯುದ್ಧ ಘೋಷಿತವಾಗಿತ್ತು, ದುರ್ಯೋಧನ ಭೀಷ್ಮನನ್ನು ಸೇನಾದಿಪತಿಯನ್ನಾಗಿ ನೇಮಿಸಲು ಹೊರಟಾಗ, ಕರ್ಣ, ಈ ಮುದುಕನಿಗೆ ಏಕೆ ಪಟ್ಟ ಕಟ್ಟುತ್ತೀಯೆ, ಶತ್ರುಗಳ ಬೆನ್ನೆಲುಬನ್ನು ಮುರಿಯಬೇಕಾದರೆ ನನಗೆ ಪಟ್ಟಕಟ್ಟು ಎನ್ನುತ್ತಾನೆ.
ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾ
ಅದಕ್ಕೆ ಹಿರಿಯರಾದ ದ್ರೋಣಾಚಾರ್ಯರು, ಸಿಂಹದ ಮುಪ್ಪೂ ಭೀಷ್ಮರ ಮುಪ್ಪುನ್ನು ಕಡೆಗಣಿಸಲಾಗದು ಏಂಬುದನ್ನು ಈ ಕೆಳಗಿನ ಪದ್ಯದಲ್ಲಿ ತಿಳಿಸುತ್ತಾರೆ.
ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಂಗಳಿನಸುಹೃಚ್ಚ ತು
ರಂಗ ಬಲಂಗಳಿನದೆಂತುಮಂಗಾಧಿಪತೀ
ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾ ಮಧ್ಯದೊಳ
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆ ನುಡಿವೈ
ಹಿರಿಯರನ್ನು ಹೇಗೆ ಉದ್ದೇಶಿಸಿ ಮಾತನಾಡಬೇಕೆಂಬುದು ನಿನಗೆ ತಿಳಿದಿಲ್ಲಾ, ನಿನ್ನ ಕುಲ ನಿನ್ನ ನಾಲಿಗೆಯಿಂದ, ಕೆಟ್ಟ ಮಾತುಗಳನ್ನು ಆಡಿಸುತ್ತಿವೆ ಎಂದು ದ್ರೋಣಾಚಾರ್ಯರು ಛೇಡಿಸುತ್ತಾರೆ.
ಅದಕ್ಕೆ ಕರ್ಣ ಕೋಪದಿಂದ
ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂಗುಣಂ
ಕುಲಮಭಿಮಾನಮೊಂದೆ ಕುಲಮಣ್ಮುಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಂ ನಿಮಗುಂಟುಮಾಡುಗುಂ
ಕುಲಕುಲ ಅಂತಾ ಯಾಕೆ ಹೀಗಳೆಯುತ್ತೀರ, ನಿಮ್ಮ ಕುಲ ಶತ್ರುವನ್ನು ಬೆನ್ನಟ್ಟಿ ಕೊಲ್ಲುವುದೇ, ಯಾವುದು ಕುಲ? ಛಲ ಕುಲ, ಅಭಿಮಾನವೆಂಬುದು ಕುಲ, ಧೈರ್ಯ ಕುಲ. ಕುಲ ಕುಲ ಎನ್ನುತ್ತಿರುವ ನಿಮಗೆ ಆ ಕುಲ ನಿಮಗೆ ವ್ಯಾಕುಲವನ್ನು ಉಂಟು ಮಾಡುತ್ತದೆ ಎಂದು ಕರ್ಣ ಕೋಪದಿಂದ ಉತ್ತರಿಸುತ್ತಾನೆ.
ಪಂಪನ ಹೆಸರನ್ನು ಅಜರಾಮರಗೋಳಿಸುವಂತಹ ಈ ಪದ್ಯಗಳು, ನಮ್ಮ ಮಕ್ಕಳಿಗೆ ಪರಚಿತವಾಗಿರಲಿ.