Feeds:
ಲೇಖನಗಳು
ಟಿಪ್ಪಣಿಗಳು

Posts Tagged ‘ಕುವೆಂಪು’

ಕರ್ನಾಟಕ ಏಕೀಕರಣದ ಚಳವಳಿಗೆ ಮೈಸೂರಿನ ಕೊಡುಗೆ ಕಡಿಮೆ ಏನಲ್ಲ. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರೂ ಕರ್ನಾಟಕ ಏಕೀಕರಣದ ಪರವಾಗಿದ್ದರು. ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಕನ್ನಡಿಗರ ಒಗ್ಗೂಡಿಕೆಯ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಆಗಿನ ಅಧಿಕಾರಸ್ಥರಿಗೆ ಹಿಡಿಸಲಿಲ್ಲ. ಅದಕ್ಕೇ ರಾಜ್ಯ ಸರ್ಕಾರ ಕುವೆಂಪು ಅವರಿಗೆ ನೋಟಿಸ್ ನೀಡಿ, ’ಪ್ರಾಧ್ಯಾಪಕರಾಗಿರುವ ನೀವು ರಾಜಕೀಯ ವಿಷಯ ಕುರಿತು ಹೇಳಿಕೆ ನೀಡಿದ್ದೀರಿ. ಇದಕ್ಕೆ ವಿವರಣೆ ಕೋಡಿ” ಎಂದು ಕೇಳಿತು. ಈ ನೋಟಿಸ್ ಗೆ ಕುವೆಂಪು ಅವರು ಅಖಂಡ ಕರ್ನಾಟಕ ಎಂಬ ಪದ್ಯವನ್ನೇ ಬರೆದು ಕಳಿಸಿದರು.

ಅಖಂಡ ಕರ್ನಾಟಕ
ಅಲ್ತೋ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಶರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ

ಎಂದು ಉತ್ತರಿಸಿದ್ದರು. ಇದು ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಕೆ.ಸಿ.ರೆಡ್ಡಿ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಕುವೆಂಪು ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಆಗ ಕೆ.ಸಿ. ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸ್ ರಾಯರ ಬಳಿ ಈ ಬಗ್ಗೆ ಚರ್ಚಿಸಿದಾಗ, ರಾಯರು ’ಕುವೆಂಪು ಕೈ ಎತ್ತಿದರೆ ಇಡೀ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸ್ಸು ಪಡೆಯುವುದೇ ಉತ್ತಮ’ ಎಂದು ಸಲಹೆ ನೀಡಿದರು.ಇದು ಮೈಸೂರು ಕರ್ನಾಟಕ ಏಕೀಕರಣದ ನನಸಿಗೆ ಶ್ರಮಿಸಿದ ಪರಿ.

ಈ ಮೇಲಿನ ವಿಚಾರವನ್ನು, ೧೯ ನವೆಂಬರ್ ೨೦೧೭ ರ ಪ್ರಜಾವಾಣಿ ಮುಕ್ತಛಂದ ದಲ್ಲಿ ಪ್ರಕಟಿತವಾದ ರವೀಂದ್ರ ಭಟ್ಟ ಅವರ ’ಚಳುವಳಿಗಳ ತವರಿಗೆ ಮತ್ತೆ ಬಂದಿದೆ ಕನ್ನಡದ ತೇರು” ಎಂಬ ಬರಹದಿಂದ ಆಯ್ದುಕೊಂಡಿದ್ದು.

Read Full Post »

ಪರಿಚಯ:
ಕುವೆಂಪು – ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ – ನವೆಂಬರ್ ೧೧, ೧೯೯೪) – ಕನ್ನಡವು ಪಡೆದ ಅತ್ಯುತ್ತಮ ಕವಿಗಳಲ್ಲೊಬ್ಬರು, ಕರ್ನಾಟಕದ ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಪ್ರಥಮ ವ್ಯಕ್ತಿ. ‘ವಿಶ್ವ ಮಾನವ’ ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-“ಕಿಶೋರ ಚಂದ್ರವಾಣಿ” -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಪತ್ನಿ ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ಜನನ ಬಾಲ್ಯ:
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಕುವೆಂಪು ಅವರ ಜನನ. ಅನಂತರ “ತವರು ಮನೆ ಹಿರಿಕೊಡಿಗೆಯಿಂದ ಗಂಡನ ಮನೆ ಕುಪ್ಪಳಿಗೆ ಚೊಚ್ಚಲು ತಾಯಿಯಾಗಿ ಸೀತಮ್ಮನವರು ತೊಟ್ಟಿಲ ಕೂಸನ್ನು ಕರೆತಂದು ಮನೆವುಗಿಸಿದಂದಿನಿಂದ ” ತಂದೆಯ ಮನೆ ಕುಪ್ಪಳಿ ಪುಟ್ಟಪ್ಪನವರ “ಮನೆ”ಯಾಯಿತು. ಕುಪ್ಪಳಿ ಮನೆಯ ಉಪ್ಪರಿಗೆ ಪೂರ್ವದಿಕ್ಕಿಗೆ ತೆರೆದುಕೊಂಡಿದೆ. ಉಳಿದೆಲ್ಲ ದಿಕ್ಕಿಗೂ ಗೋಡೆ, ಕಿಟಕಿಗಳಿವೆ. ಅಲ್ಲಿ ಕುಳಿತು ನೋಡಿದರೆ ಎದುರಿಗೆ ಇಳಿಜಾರಾಗಿ ಮೇಲೆದ್ದಿರುವ ಅನಂತ ನಿಬಿಡಾರಣ್ಯ ಶ್ರೇಣಿಗಳು ಸುಂದರವಾಗಿ ರಂಜಿಸುವುವು. ಮನೆಯ ಮುಂದೆಯೆ, ಅಡಕೆ ತೋಟದಾಚೆಯ ಮೊದಲುಗೊಂಡು ನಡು ಆಕಾಶದವರೆಗೆಂಬಂತೆ ಗೋಡೆ ಹಾಕಿದಂತೆ ಕಡಿದಾಗಿ ವಿಜೃಂಭಿಸಿ ಮಹೋನ್ನತವಾಗಿ ಮೇಲೆದ್ದು, ನಿತ್ಯ ಶ್ಯಾಮಲ ಅರಣ್ಯಾಚ್ಛಾದಿತವಾಗಿರುವ ಮಲೆ ಮತ್ತು ಮನೆಯ ಹಿಂಬದಿಯಿಂದಲೆ ಪ್ರಾರಂಭವಾಗಿ ವಿರಳ ಮರಪೊದೆಗಳಿಂದ ಹಕ್ಕಲು ಹಕ್ಕಲಾಗಿ ಮೇಲೇರಿ ಏರಿ ಬಂಡೆ ಮಂಡೆಯಲ್ಲಿ ಕೊನೆಗೊಂಡಿರುವ ಹಿರಿಯ ಹಾಸುಗಳಲ್ಲಿನ ಕವಿಶೈಲ! – ಇವೆರಡೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ ಅವರ ಬಾಲ್ಯದ ರಸಜೀವನದ ಬದುಕಿಗೆ ಉಸಿರನ್ನಿತ್ತು ಪೊರೆದಿವೆ. ಮುಂದೆ ಮಹಾಕವಿಯಾಗಲಿರುವ ಒಂದು ಋಷಿ ಚೇತನದ ವಿಕಾಸನಕ್ಕೆ ವಿಧಿ ಅದಕ್ಕಿಂತಲೂ ಹೆಚ್ಚು ಅರ್ಹವೂ ಅನುಕೂಲವೂ ಆದ ಭಿತ್ತಿರಂಗವನ್ನು ಕೆತ್ತಲಾರದೆಂದೇ ತೋರುತ್ತದೆ.
ವಿದ್ಯಾಭ್ಯಾಸ:
ಮೈಸೂರಿನ ‘ಮಹಾರಾಜಾ’ ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು.
ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆಗಳು:
ಕೃತಿಗಳು:
ಕುವೆಂಪು ಅವರು ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಮಹಾಕಾವ್ಯ:
ಶ್ರೀರಾಮಾಯಣ ದರ್ಶನಂ –  (ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ),
ಕಾದಂಬರಿ:
ಮಲೆಗಳಲ್ಲಿ ಮದುಮಗಳು,
ಕಾನೂರು ಹೆಗ್ಗಡಿತಿ
ಕಥಾ ಸಂಕಲನ:
ಸನ್ಯಾಸಿ ಮತ್ತು ಇತರ ಕತೆಗಳು
ಜೀವನ ಚರಿತ್ರೆ:
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ನಾಟಕಗಳು:
ಶೂದ್ರ ತಪಸ್ವಿ
ರಕ್ತರಾತ್ರಿ
ರಕ್ತಾಕ್ಷಿ
ಯಮನ ಸೋಲು
ಬೆರಳ್ಗೆ ಕೊರಳ್
ಕವನಸಂಕಲನಗಳು:
ಪಕ್ಷಿಕಾಶಿ,
ಪಾಂಚಜನ್ಯ,
ಅನಿಕೇತನ,
ಚಂದ್ರಮಂಚಕೆ ಬಾ ಚಕೋರಿ,
ಕೊಳಲು
ಪ್ರಶಸ್ತಿ- ಪುರಸ್ಕಾರ:
⦁ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – (ಶ್ರೀರಾಮಾಯಣ ದರ್ಶನಂ) (1212)
⦁ ಪದ್ಮಭೂಷಣ (೧೯೫೮)
⦁ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್.
⦁ ರಾಷ್ಟ್ರಕವಿ ಪುರಸ್ಕಾರ (೧೯೬೪)
⦁ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
⦁ ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
⦁ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
⦁ ಪದ್ಮವಿಭೂಷಣ (೧೯೮೯)
⦁ ಕರ್ನಾಟಕ ರತ್ನ (೧೯೯೨)
⦁ ಪಂಪ ಪ್ರಶಸ್ತಿ(೧೯೮೮)

Read Full Post »

ಕವಿ – ಕುವೆಂಪು

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನೆಮ್ಮಗೆ ಕಲ್ಪತರು

ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನನೋದುವ ನಿನ್ನಾನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ

ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಮಲೆನಾಡಿಗೆ ಮುನ್ಗೋಳಿ ಕೂಗುವ ಮನ
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾ ಮನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ನಿತ್ಯ

Read Full Post »

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೊಟಿಗಳನೆ ಮೀಟಿ
ಏದೆಯ ಬಿರಿಯೆ ಭಾವದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ

ಏಲ್ಲಿಯು ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ದಿಗ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯ ಯೊಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು
ಓ ನನ್ನ ಚೇತನ
ಆಗು ನೀ ಅನಿಕೇತನ

Read Full Post »

crying-baby.jpg 

ಕವಿ – ಕುವೆಂಪು

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
“ಅಯ್ಯೋ ಪಾಪ” ಎಂದುಕೊಂಡು ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು

Read Full Post »