ಕವಿ – ಶಂ. ಗು. ಬಿರಾದಾರ
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ ||
ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿ
ಗೊಂದೆ ಭಾರತ ಮಂದಿರ
ಶಾಂತಿದಾತನು ಗಾಂಧಿತಾತನು
ಎದೆಯ ಬಾನಿನ ಚಂದಿರ ||
ಜಾತಿರೋಗದ ಭೀತಿ ಕಳೆಯುವ
ನೀತಿ ಮಾರ್ಗದಿ ನಡೆವೆವು
ಒಂದೇ ಮಾನವ ಕುಲವು ಎನ್ನುತ
ವಿಶ್ವಧರ್ಮವ ಪಡೆವೆವು ||
ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು ||
ನಮ್ಮ ಸುತ್ತಲು ಹೆಣೆದುಕೊಳ್ಳಲು
ಸ್ನೇಹಪಾಶದ ಬಂಧನ
ಬೆಳಕು ಬೀರಲಿ, ಗಂಧ ಹರಡಲಿ
ಉರಿದು ಪ್ರೇಮ ಚಂದನ ||
ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲು
ಭೂಮಿ ತನ್ನ ಕಂದನ ||