Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಜನಪದ ಕತೆ-ಗೀತೆಗಳು’ Category

ಯಾತಕ್ಕೆ ಮಳೆ ಹೋದವೊ ಶಿವಶಿವ
ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದಾರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೆ ||

ಹೊಟ್ಟೇಗೆ ಅನ್ನ ಇಲ್ಲಾದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂಥ ಸ್ತ್ರೀಯರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದಲೆ ||

ಹಸುಗೂಸು ಹಸಿವೀಗೆ ತಾಳಾದಲೆ
ಅಳುತಾವೆ ರೊಟ್ಟಿ ಕೇಳುತಲೆ
ಹಡೆದ ಬಾಣಂತೀಗೆ ಅನ್ನಾವು ಇಲ್ಲದೆಲೆ
ಏರುತಾವೆ ಓಳ ಕೈಗೆ ಬಳೆ ||

ಒಕ್ಕಾಲು ಮಕ್ಕಳಂತೆ ಅವರಿಂದು
ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ದುಃಖವನು ಪಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ ||

Read Full Post »

ಯಾಕೆ ಬಡಿದಾಡ್ತಿ ತಮ್ಮ
ಮಾಯಾ ನೆಚ್ಚಿ ಸಂಸಾರ ಮೆಚ್ಚಿ
ನೀಲೋಕ ಅರಿಯೆ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ ||

ಹೆಂಡ್ರು ಮಕ್ಳಿರುವರು ತಮ್ಮ
ಎಲ್ಲಿತನಕಾ | ಇದ್ರೆ ತಿನ್ನೊತನಕ
ಸತ್ತಾಗ ಬರುವರು ತಮ್ಮ
ಗುಣಿತನಕಾ ಮಣ್ಣು ಮುಚ್ಚೋತನಕ||

ಅಣ್ಣ ತಮ್ಮ ಅಕ್ಕ ತಮ್ಮ
ಎಲ್ಲಿ ತನಕಾ | ಬದುಕಿ ಬೆಳೆಯೋತನಕ
ಸತ್ತಾಗ ಬರುವರು ತಮ್ಮ
ಗುಣಿತನಕಾ ಮಣ್ಣು ಮುಚ್ಚೋತನಕ||

ಹೆಣ್ಣು ಹೊನ್ನು ಮಣ್ಣು ನಿನ್ನದು
ಎಲ್ಲೀತನಕಾ, ನಿನ್ನಾ ಕೊರಳಿಗೆ ಕುಣಿಕೆ ಬೀಳೋತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ
ಕಳಚಯ್ಯ ಮಾಯದ ಪೊರೆಯ ಮುಕ್ತೀ ಹೊಂದಾಕ ||

Read Full Post »

ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದಲಿ ಕಾಯೊ ಗಣನಾಯ್ಕ ||

ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ ||
ಉದ್ದುಹೋಳಿಗೆ ತುಪ್ಪ ಗಣನಾಯ್ಕ
ನಿಮ್ಗೆ ತಪ್ಪದೆ ಒಪ್ಪಿಸುವೆ ಗಣನಾಯ್ಕ ||

ಗೊನೆಮೇಗ್ಲ ಬಾಳೆಹಣ್ಣು ಗಣನಾಯ್ಕ
ನಿಮ್ಗೆ ಕಳಿ ಅಡ್ಡಿ ಚಿಗುರೆಲೆ ಗಣನಾಯ್ಕ ||
ಕೊಂಬೆಮೇಗ್ಲ ನಿಂಬೆಹಣ್ಣು ಗಣನಾಯ್ಕ
ನಿಮ್ಗೆ ಬಡಗಾಯಿ ಇಡಗಾಯಿ ಗಣನಾಯ್ಕ ||

ಕರ್ಪೂರ ಸಾಂಬ್ರಾಣಿ ಗಣನಾಯ್ಕ
ನಿಮ್ಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ ||
ಹಸುರಂಗ ಕಾಲ್ಗಡಗ ಗಣನಾಯ್ಕ
ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ ||

ಮೂಷಕ ವಾಹನ ಗಣನಾಯ್ಕ
ನಮ್ಮ ಶಿವನ ಕುಮಾರನಯ್ಯ ಗಣನಾಯ್ಕ ||
ನಿನ್ಗೆ ಹೆಂಡ್ರಿಲ್ಲ ಮಕ್ಳಿಲ್ಲ ಗಣನಾಯ್ಕ
ನೀ ಎದ್ದು ಬಾರಯ ಸಿದ್ದಿ ಗಣನಾಯ್ಕ ||

ಬಿಲ್ಪತ್ರೆ ವನದಲ್ಲಿ ಗಣನಾಯ್ಕ
ನಿನ್ನಧ್ಯಾನ ಮಾಡಿ ನೆನ್ಬೇಬಯಾ ಗಣನಾಯ್ಕ ||
ಕಂಟಕ ಹರ ನೀನು ಗಣನಾಯ್ಕ
ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ ||

Read Full Post »

ಒಗಟುಗಳು

ಅಜ್ಜಿಗೊಂದು ಅಂಗಿ
ಅಂಗಿಯೊಳಗೆ ಮೀಸೆ
ಮೀಸೆ ಬಿಡಿಸೆ ಹಲ್ಲು
ಹಲ್ಲು ಕಡಿಯೆ ಹಿಟ್ಟು
ಹಿಟ್ಟು ತಟ್ಟೆ ರೊಟ್ಟಿ

(ಉತ್ತರ: ಮುಸುಕಿನ ಜೋಳ)

ಅಂಕು ಡೊಂಕು ಬಾವಿ
ಶಂಖ ಚಕ್ರದ ಬಾವಿ
ಬೊಮ್ಮಯ್ಯ ಕಟ್ಟಿಸಿದ ಬಾವಿ
ಇಣುಕಿ ನೋಡಿದರೆ ಒಂದು ತೊಟ್ಟೂ ನೀರಿಲ್ಲಾ

(ಉತ್ತರ: ಕಿವಿ)

ಕೆರೆಯೆಲ್ಲಾ ಕುರಿ ಹೆಜ್ಜೆ

(ಉತ್ತರ: ನಕ್ಷತ್ರಗಳು)

Read Full Post »

ಅಲ್ಲಾಡುವ ಹಲ್ಲಿನ ಮೇಲೆ ಹಲಗೆ ಬಿದ್ದಂತೆ

ಎಮ್ಮೆಗೆ ಎರಡು ಕೋಡು, ಹೆಮ್ಮೆಗೆ ಎಂಟು ಕೋಡು

ಓರಳಲ್ಲಿ ಕೂತರೆ ಒನಕೆ ಪೆಟ್ಟು ತಪ್ಪೀತೇ?

ಕಡು ಕೋಪ ಬಂದಾಗ ತಡಕೊಂಡವನೆ ಜಾಣ

ಕಪ್ಪೆ ಕೂಗಿ ಮಳೆ ಬರಿಸಿದ ಹಾಗೆ

ಕದ್ದು ಮದುವೆ ಆಗ್ತೀನಿ, ಬಗ್ಗಿ ಓಲಗ ಊದು

ಕಬ್ಬಿಣದ ಗಡಾರಿ ನುಂಗಿ ಶುಂಠಿ ಕಷಾಯ ಕುಡಿದ ಹಾಗೆ

ಕರಡಿ ಕೈಗೆ ಹೆದರದವ ಕರಿಕಂಬಳಿಗೆ ಹೆದರ್ಯಾನೆ?

ಕಾಡಲ್ಲಿ ಹೊಂಬಾಲೆ ಬಯಸಿದ ಹಾಗೆ

ಕಾಸಿಗೆ ಒಂದು ಸೀರೆಯಾದರೂ ನಾಯಿ ಮೈ ಬೆತ್ತಲೆ

ಕಿಚ್ಚೆದ್ದಾಗ ಬಾವೀ ತೋಡಿದ

ಕಿಟಕಿಯಿಂದ ನುಸುಳುವವ, ಹೆಬ್ಬಾಗಿಲಿನಿಂದ ಬಾರನೆ?

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ

ಕುರುಬನ ಮಂದೆ ತೋಳ ಕಾದ ಹಾಗೆ

ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ

ಕೋಟಿ ವಿದ್ಯೆಯೂ ಕೂಳಿಗೊಸ್ಕರವೇ

ಗಂಗೆಗೆ ಹೋಗಿ ತೆಂಗಿನ ಓಟೆ ತಂದ ಹಾಗೆ

ಗುರುವಿನಂತೆ ಶಿಷ್ಯ, ತಂದೆಯಂತೆ ಮಗ

ಚರ್ಮ ತೊಳೆದರೆ ಕರ್ಮ ಹೋದೀತೆ?

ಚಾಡಿಕೋರನಿಗೆ ಊರೆಲ್ಲ ನೆಂಟರು

ಚಿಂತೆಯೇ ಮುಪ್ಪು, ಸಂತೋಷವೇ ಯೌವನ

ಚೇಳಿನ ಮಂತ್ರವನ್ನರಿಯದವನ ಹಾವಿನ ಹುತ್ತಕ್ಕೆ ಕೈಯಿಕ್ಕಿದ ಹಾಗೆ

ಜೋಗಿಗೆ ಜೋಗಿ ತಬ್ಬಿಕೊಂಡರೆ ಮೈಯೆಲ್ಲಾ ಬೂದಿ

ತರ್ಕಾ ಮಡುವವ ಮೂರ್ಖನಿಗಿಂತ ಕಡೆ

ತಾ ಕಳ್ಳನಾದರೆ ಪರರ ನಂಬ

ತೀರಕ್ಕೆ ಬಂದ ಮೇಲೆ ತೆರೆಯ ಭಯವೇ?

ತುಂತುರು ಮಳೆಯಿಂದ ತೂಬಿನಕೆರೆ ತುಂಬೀತೆ?

ದೇವರ ಮಗನಾದರೂ ಮಾಡಿದ್ದೇ ಉಣ್ಣಬೇಕು

ಪ್ರಾಯ ಹೆಚ್ಚಾದರೂ ಬಾಯಿ ಚೆಂದಾಗಿರಬೇಕು

ಬಂದ ದಿವಸ ನಂಟ, ಮರುದಿವಸ ಭಂಟ, ಮೂರನೇ ದಿವಸ ಕಂಟ

ಬಗ್ಗಿಕೊಂಡು ಉತ್ತರೆ ಕಂದಾಯ ತಪ್ಪುತ್ತದೆಯೆ?

ಬಲೆಗೆ ಸಿಕ್ಕದ್ದು ಕೋಲಿಗೆ ಸಿಕ್ಕೀತೆ?

ಬಾಳೆ ಹಣ್ಣಿಗೆ ಗರಗಸವೇಕೆ?

ಬೇರು ಬಲ್ಲಾತನಿಗೆ ಎಲೆ ತೋರಿಸಬೇಕೆ?

ಬೋರೆಗಿಡದಲ್ಲಿ ಕಾರೆ ಹಣ್ಣಾದೀತೆ?

ಬಾವೀ ನೀರಾದರೆ ಭಾವಿಸಿದರೆ ಬಂದೀತೆ?

ಭೋಗಿಗೆ ಯೋಗಿ ಮರುಳು, ಯೋಗಿಗೆ ಭೋಗಿ ಮರಳು

ಮಠಪತಿಯಾದರೂ ಶಠಪತಿ ಬಿಡಲಿಲ್ಲ

ಮಡಕೆ ಒಡೆಯುವುದಕ್ಕೆ ಅಡಿಕೆ ಮರ ಬೇಕೆ?

ಮಣ್ಣು ದೇವರಿಗೆ ಮಜ್ಜನವೇ ಸಾಕ್ಷಿ

ಮಣ್ಣು ಕುದುರೆ ಏರಿ ನದಿ ದಾಟಿದಂತೆ

ಮನೆ ದೀಪವಾದರೆ ಮುತ್ತು ಕೊಡಬಹುದೇ?

ಮಳೆಗೆ ಹೆದರಿ ಹೊಳೆಗೆ ಬಿದ್ದ ಹಾಗೆ

ಮಾತು ಬಂದಾಗ ಸೋತು ಹೋದವನೇ ಜಾಣ

ಮೀನು ನೀರಿನಲ್ಲಿ ಮುಳುಗಿದರೆ ಸ್ನಾನದ ಫಲ ಬಂದೀತೇ?

ಮೂವರ ಕಿವಿಗೆ ಮುಟ್ಟಿದ್ದು, ಮೂರು ಲೊಕಕ್ಕೆ ಮುಟ್ಟುವುದು

ಮೆಚ್ಚಿದವನಿಗೆ ಮಸಣವೇ ಸುಖ

ಮೆಟ್ಟಿದಲ್ಲದೆ ಹಾವು ಕಡಿಯದು

ಮೊಗೇ ಮಾಡದ ಕುಂಬಾರ ಗುಡಾನ ಮಾಡಾನೆ?

ಯಾವ ರಾಯನಿಗೆ ರಾಜ್ಯವಾದರೂ ರಾಗಿ ಬೀಸೋದು ತಪ್ಪದು

ಲೋಕದವರೆಲ್ಲಾ ಸತ್ತರೆ ಶೋಕ ಮಾಡುವರ್ಯಾರು?

ವೈರೈದ್ದವನಿಂದ ಕ್ಷೌರ ಮಾಡಿಸಿಕೊಂಡ ಹಾಗೆ

ಶಕ್ತಿಯಿದ್ದವನಾದರೂ ಯುಕ್ತಿಯಿದ್ದವನ ಕೆಳಗೆ

ಶಾಪ ಕೊಡುವವ ಪಾಪಕ್ಕೆ ಹೆದರ್

ಶ್ವಾನದ ಮುಂದೆ ಹಾಡು ಹಾಡಿದ ಹಾಗೆ

ಸತ್ತ ಕುರಿ ಕಿಚ್ಚಿಗೆ ಅಂಜೀತೇ?

ಸತ್ಯವಿದ್ದರೆ ಎತ್ತಲೂ ಭಯವಿಲ್ಲ

ಸಮುದ್ರದ ಮುಂದೆ ಅರವಟಿಗೆ

ಸಮುದ್ರದ ದೊಡ್ಡದಾದರೂ ಪಾತ್ರೆ ಇದ್ದಷ್ಟೇ ನೀರು ಸಿಕ್ಕೀತು

ಹೊಳೆಗೆ ನೆನೆಯದ ಕಲ್ಲು, ಮಳೆಗೆ ನೆನೆದೀತೇ?

ಹೋಗದ ಊರಿಗೆ ದಾರಿ ಕೇಳಿದ ಹಾಗೆ

Read Full Post »

ಆನೆ ಬಂತೊಂದಾನೆ
ಯಾವೂರ ಆನೆ?
ಬಿಜಾಪುರ ಆನೆ
ಇಲ್ಲಿಗ್ಯಾಕ ಬತ್ತು?
ಹಾದಿ ತಪ್ಪಿ ಬತ್ತು
ಹಾದಿಗೊಂದು ಕೊಬ್ರಿ
ಬೀದಿಗೊಂದು ಕೊಬ್ರಿ
ಲಟ ಲಟ ಮುರಿತು
ಪಟ ಪಟ ತಿಂತು

ಕೃಪೆ : ಅಮಿತ್ ಬಿರಾದರ್

Read Full Post »

« Newer Posts - Older Posts »