Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಕನ್ನಡ ಸಾಹಿತ್ಯ’ Category

ಕರ್ನಾಟಕ ಏಕೀಕರಣದ ಚಳವಳಿಗೆ ಮೈಸೂರಿನ ಕೊಡುಗೆ ಕಡಿಮೆ ಏನಲ್ಲ. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರೂ ಕರ್ನಾಟಕ ಏಕೀಕರಣದ ಪರವಾಗಿದ್ದರು. ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಕನ್ನಡಿಗರ ಒಗ್ಗೂಡಿಕೆಯ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಆಗಿನ ಅಧಿಕಾರಸ್ಥರಿಗೆ ಹಿಡಿಸಲಿಲ್ಲ. ಅದಕ್ಕೇ ರಾಜ್ಯ ಸರ್ಕಾರ ಕುವೆಂಪು ಅವರಿಗೆ ನೋಟಿಸ್ ನೀಡಿ, ’ಪ್ರಾಧ್ಯಾಪಕರಾಗಿರುವ ನೀವು ರಾಜಕೀಯ ವಿಷಯ ಕುರಿತು ಹೇಳಿಕೆ ನೀಡಿದ್ದೀರಿ. ಇದಕ್ಕೆ ವಿವರಣೆ ಕೋಡಿ” ಎಂದು ಕೇಳಿತು. ಈ ನೋಟಿಸ್ ಗೆ ಕುವೆಂಪು ಅವರು ಅಖಂಡ ಕರ್ನಾಟಕ ಎಂಬ ಪದ್ಯವನ್ನೇ ಬರೆದು ಕಳಿಸಿದರು.

ಅಖಂಡ ಕರ್ನಾಟಕ
ಅಲ್ತೋ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಶರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ

ಎಂದು ಉತ್ತರಿಸಿದ್ದರು. ಇದು ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಕೆ.ಸಿ.ರೆಡ್ಡಿ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಕುವೆಂಪು ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಆಗ ಕೆ.ಸಿ. ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸ್ ರಾಯರ ಬಳಿ ಈ ಬಗ್ಗೆ ಚರ್ಚಿಸಿದಾಗ, ರಾಯರು ’ಕುವೆಂಪು ಕೈ ಎತ್ತಿದರೆ ಇಡೀ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸ್ಸು ಪಡೆಯುವುದೇ ಉತ್ತಮ’ ಎಂದು ಸಲಹೆ ನೀಡಿದರು.ಇದು ಮೈಸೂರು ಕರ್ನಾಟಕ ಏಕೀಕರಣದ ನನಸಿಗೆ ಶ್ರಮಿಸಿದ ಪರಿ.

ಈ ಮೇಲಿನ ವಿಚಾರವನ್ನು, ೧೯ ನವೆಂಬರ್ ೨೦೧೭ ರ ಪ್ರಜಾವಾಣಿ ಮುಕ್ತಛಂದ ದಲ್ಲಿ ಪ್ರಕಟಿತವಾದ ರವೀಂದ್ರ ಭಟ್ಟ ಅವರ ’ಚಳುವಳಿಗಳ ತವರಿಗೆ ಮತ್ತೆ ಬಂದಿದೆ ಕನ್ನಡದ ತೇರು” ಎಂಬ ಬರಹದಿಂದ ಆಯ್ದುಕೊಂಡಿದ್ದು.

Read Full Post »

ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಬರುವ ನಾಟಕೀಯತೆ, ಹಾಗು ವಿಶೇಷವಾದ ಪದ್ಯಗಳನ್ನು ಇಲ್ಲಿ ಕೊಡಲಾಗಿದೆ.

ಕುರುಕ್ಷೇತ್ರ ಯುದ್ಧ ಘೋಷಿತವಾಗಿತ್ತು, ದುರ್ಯೋಧನ ಭೀಷ್ಮನನ್ನು ಸೇನಾದಿಪತಿಯನ್ನಾಗಿ ನೇಮಿಸಲು ಹೊರಟಾಗ, ಕರ್ಣ, ಈ ಮುದುಕನಿಗೆ ಏಕೆ ಪಟ್ಟ ಕಟ್ಟುತ್ತೀಯೆ, ಶತ್ರುಗಳ ಬೆನ್ನೆಲುಬನ್ನು ಮುರಿಯಬೇಕಾದರೆ ನನಗೆ ಪಟ್ಟಕಟ್ಟು ಎನ್ನುತ್ತಾನೆ.

ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾ

ಅದಕ್ಕೆ ಹಿರಿಯರಾದ ದ್ರೋಣಾಚಾರ್ಯರು, ಸಿಂಹದ ಮುಪ್ಪೂ ಭೀಷ್ಮರ ಮುಪ್ಪುನ್ನು ಕಡೆಗಣಿಸಲಾಗದು ಏಂಬುದನ್ನು ಈ ಕೆಳಗಿನ ಪದ್ಯದಲ್ಲಿ ತಿಳಿಸುತ್ತಾರೆ.

ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಂಗಳಿನಸುಹೃಚ್ಚ ತು
ರಂಗ ಬಲಂಗಳಿನದೆಂತುಮಂಗಾಧಿಪತೀ

ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾ ಮಧ್ಯದೊಳ
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆ ನುಡಿವೈ

ಹಿರಿಯರನ್ನು ಹೇಗೆ ಉದ್ದೇಶಿಸಿ ಮಾತನಾಡಬೇಕೆಂಬುದು ನಿನಗೆ ತಿಳಿದಿಲ್ಲಾ, ನಿನ್ನ ಕುಲ ನಿನ್ನ ನಾಲಿಗೆಯಿಂದ, ಕೆಟ್ಟ ಮಾತುಗಳನ್ನು ಆಡಿಸುತ್ತಿವೆ ಎಂದು ದ್ರೋಣಾಚಾರ್ಯರು ಛೇಡಿಸುತ್ತಾರೆ.

ಅದಕ್ಕೆ ಕರ್ಣ ಕೋಪದಿಂದ

ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂಗುಣಂ
ಕುಲಮಭಿಮಾನಮೊಂದೆ ಕುಲಮಣ್ಮುಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಂ ನಿಮಗುಂಟುಮಾಡುಗುಂ

ಕುಲಕುಲ ಅಂತಾ ಯಾಕೆ ಹೀಗಳೆಯುತ್ತೀರ, ನಿಮ್ಮ ಕುಲ ಶತ್ರುವನ್ನು ಬೆನ್ನಟ್ಟಿ ಕೊಲ್ಲುವುದೇ, ಯಾವುದು ಕುಲ? ಛಲ ಕುಲ, ಅಭಿಮಾನವೆಂಬುದು ಕುಲ, ಧೈರ್ಯ ಕುಲ. ಕುಲ ಕುಲ ಎನ್ನುತ್ತಿರುವ ನಿಮಗೆ ಆ ಕುಲ ನಿಮಗೆ ವ್ಯಾಕುಲವನ್ನು ಉಂಟು ಮಾಡುತ್ತದೆ ಎಂದು ಕರ್ಣ ಕೋಪದಿಂದ ಉತ್ತರಿಸುತ್ತಾನೆ.

ಪಂಪನ ಹೆಸರನ್ನು ಅಜರಾಮರಗೋಳಿಸುವಂತಹ ಈ ಪದ್ಯಗಳು, ನಮ್ಮ ಮಕ್ಕಳಿಗೆ ಪರಚಿತವಾಗಿರಲಿ.

Read Full Post »

ನಾವು ಚಿಕ್ಕವರಿದ್ದಾಗ, ಎಷ್ಟೋವೇಳೆ ಕರ್ತೃ ಯಾರೆಂದು ತಿಳಿಯದಿದ್ದರೂ, ಅವರ ಕೃತಿಯ ಕೆಲವು ಪದ್ಯಗಳನ್ನ ಬಾಯಿ ಪಾಠ ಮಾಡುತಿದ್ದುದು ಉಂಟು. ಅಂಥಹ ಪದ್ಯಗಳಲ್ಲಿ ಒಂದು, ಕುಮಾರವ್ಯಾಸ ರಚಿಸಿರುವ ಕರ್ನಾಟಕ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತದ ಮೊದಲನೇ ಪದ್ಯವನ್ನು ಇಲ್ಲಿ ಕೊಡಲಾಗಿದೆ.

ಶ್ರೀ ವನಿತೆಯರಸನೆ ವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಾಯಣ

Read Full Post »

ಪಂಪಭಾರತದ ಚತುರ್ಥಾಶ್ವಾಸಂದಲ್ಲಿ ಬರುವ ಬನವಾಸಿಯ ವರ್ಣನೆ ಬಹಳ ಅನನ್ಯವಾದುದು.

ಬನವಾಸಿದೇಶದ ವರ್ಣನೆ

ಚಂ || ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನ ವನಂಗಳೊಳಂ ಬನವಾಸಿ ದೇಶದೊಳ್

ಉ || ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್

ಪಂಪನ ದೇಶಪ್ರೇಮ

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ಮ || ಅಮರ್ದಂ ಮುಕ್ಕಳಿಪಂತುಟಪ್ಪ ಸುಸಿಲೊಂದಿಂಪುಂ ತಗುಳ್ದೊಂದು ಗೇ
ಯಮುಮಾದಕ್ಕರಗೊಟ್ಟಿಯುಂ ಚದುರರೊಳ್ವಾತುಂ ಕುಳಿರ್ ಕೋಳ್ಪ ಜೊಂ
ಪಮುಮೇವೇಳ್ಪುದನುಳ್ಳ ಮೆಯ್ಸುಖಮುಮಿತೆನ್ನಂ ಕರಂ ನೋಡಿ ನಾ
ಡೆ ಮನಂಗೊಂಡಿರೆ ತೆಂಕನಾಡ ಮಱೆಯಲ್ಕಿನ್ನೇಂ ಬರ್ಕುಮೇ

Read Full Post »

ಕವಿ – ಶಂ. ಗು. ಬಿರಾದಾರ

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ ||

ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿ
ಗೊಂದೆ ಭಾರತ ಮಂದಿರ
ಶಾಂತಿದಾತನು ಗಾಂಧಿತಾತನು
ಎದೆಯ ಬಾನಿನ ಚಂದಿರ ||

ಜಾತಿರೋಗದ ಭೀತಿ ಕಳೆಯುವ
ನೀತಿ ಮಾರ್ಗದಿ ನಡೆವೆವು
ಒಂದೇ ಮಾನವ ಕುಲವು ಎನ್ನುತ
ವಿಶ್ವಧರ್ಮವ ಪಡೆವೆವು ||

ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು ||

ನಮ್ಮ ಸುತ್ತಲು ಹೆಣೆದುಕೊಳ್ಳಲು
ಸ್ನೇಹಪಾಶದ ಬಂಧನ
ಬೆಳಕು ಬೀರಲಿ, ಗಂಧ ಹರಡಲಿ
ಉರಿದು ಪ್ರೇಮ ಚಂದನ ||

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲು
ಭೂಮಿ ತನ್ನ ಕಂದನ ||


Read Full Post »

ಪಂಪ ಭಾರತ / ವಿಕ್ರಮಾರ್ಜುನ ವಿಜಯ

ಹಳೆಕನ್ನಡ ಕಾವ್ಯಸಂಗ್ರಹ ವನ್ನು ಕೆಳಗಿನ ಬ್ಲಾಗ್ ನಲ್ಲಿ ಓದಬಹುದು.

ಹಳೆಗನ್ನಡಕಾವ್ಯ ಸಂಗ್ರಹ

Read Full Post »

Older Posts »