Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಈಸೋಪನ ಕತೆಗಳು’ Category

ಒಮ್ಮೆ ಬೆಟ್ಟದ ಮಧ್ಯದಲ್ಲಿ ಹರಿಯುತ್ತಿದ್ದ ತೊರೆಯ ಬಳಿ ತೋಳವೊಂದು ನೀರು ಕುಡಿಯಲು ಬಂತು. ನೀರು ಕುಡಿದು ತಲೆಯೆತ್ತಿದ ತೋಳನಿಗೆ, ಕುರಿ ಮರಿಯೊಂದು ಕೆಳಗಡೆ ನೀರು ಕುಡಿಯುತಿದ್ದು ಕಾಣಿಸಿತು. ತೋಳನ ಬಾಯಲ್ಲಿ ನೀರು, ನನ್ನ ರಾತ್ರಿ ಊಟ ಸಿಕ್ಕಿತೆಂದುಕೊಂಡು, ಕುರಿಗೆ “ನೀನು ನಾನು ಕುಡಿಯುವ ನೀರನ್ನು ಗಲೀಜು ಮಾಡುತಿದ್ದೀಯ” ಎಂದು ಗದರಿ ಕೇಳಿತು.
ಅದಕ್ಕೆ ಕುರಿ ಮರಿ, “ಇಲ್ಲಪ್ಪ ದೊರೆ ಇಲ್ಲ, ನೀರು ನೀನು ಇರುವಲ್ಲಿಂದ ನನ್ನ ಕಡೆ ಬರುತ್ತಿದೆ, ಹಾಗಾಗಿ ನಾನು ನಿನ್ನ ನೀರನ್ನು ಗಲೀಜು ಮಾಡುತ್ತಿಲ್ಲ” ಎಂದು ಉತ್ತರಿಸಿತು.
“ಸರಿ ಹಾಗಾದರೆ, ಹೋದ ವರ್ಷ ನನ್ನನ್ನ ಕೆಟ್ಟವ ಎಂದು ಯಾಕೆ ಕರೆದೆ” ಎಂದು ಕಿರುಚಿತು ತೋಳ .
“ನಾನು ನಿನ್ನನ್ನು ಕೆಟ್ಟವ ಎಂದು ಕಳೆದ ವರ್ಷ ಕರೆದಿರುವುದು ಸಾಧ್ಯವೇ ಇಲ್ಲಾ, ಯಾಕೆಂದರೆ ನನ್ನ ವಯಸ್ಸು ಆರು ತಿಂಗಳು ಅಷ್ಟೇ” ಎಂದು ಕುರಿ ಉತ್ತರಿಸಿತು.
“ನಂಗೊತ್ತಿಲ್ಲ, ನೀನಲ್ಲ ಅಂದರೆ ನಿಮ್ಮಪ್ಪ ಅಂದಿರಬಹುದು” ಎಂದು ತೋಳ, ಕೆಳಗಡೆ ಹಾರಿ ಕುರಿ ಮರಿಯನ್ನು ಕೊಂದು ತಿಂದಿತು. ಸಾಯುವ ಮೊದಲು ಕುರಿ ಬಾಯಿಂದ, “ಕೆಟ್ಟವರಿಗೆ ಇನ್ನೊಬ್ಬರನ್ನು ಹಾಳುಗೆಡವಲು ಯಾವುದೇ ಕಾರಣ ಬೇಕಿಲ್ಲ” ಎಂಬ ಉದ್ಗಾರ ಹೊರಬಿತ್ತು.

Read Full Post »

ಒಮ್ಮೆ ಒಂದು ಸಿಂಹ, ನರಿ, ಗುಳ್ಳೆ ನರಿ ಹಾಗು ತೋಳದೊಡನೆ ಬೇಟೆಯಾಡಲು ಹೊರಟಿತು. ಬಹಳ ಹೊತ್ತಿನ ಹುಡುಕಾಟದ ನಂತರ, ಇವುಗಳ ಕಣ್ಣಿಗೆ ಜಿಂಕೆ ಯೊಂದು ಕಾಣಿಸಿತು. ಎಲ್ಲರು ಸೇರಿ ಜಿಂಕೆಯನ್ನು ಕೊಂದವು. ಸರಿ ಈಗ ಜಿಂಕೆಯ ಮಾಂಸದ ಪಾಲನ್ನು ಹೇಗೆ ವಿಂಗಡಿಸುವುದು ಎಂದು ಎಲ್ಲರೂ ಯೋಚಿಸುತಿದ್ದಾಗ, ಸಿಂಹ ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿ ಎಂದು ಗುಡುಗಿತು. ಇತರರಿಗೆ ಕುಶಿಯಾಯಿತು, ಎಲ್ಲರಿಗು ಒಂದೊಂದು ಪಾಲು ಸಿಗುತ್ತದೆ ಎಂದು ಕೊಂದು ಜಿಂಕೆಯ ಮಾಂಸವನ್ನು ನಾಲ್ಕು ಪಾಲಾಗಿ ವಿಂಗಡಿಸಿದವು.

ಸಿಂಹ ಮುಂದೆ ಬಂದು, ” ಮೊದಲನೇ ಭಾಗ ಕಾಡಿನ ರಾಜನಾದ ನನ್ನ ಪಾಲು, ಎರಡನೇ ಭಾಗ ಈ ವಿಭಾಗವನ್ನು ಮಾಡುವ ನ್ಯಾಯಾಧೀಶನಾದ ನನ್ನ ಪಾಲು, ಮೂರನೆಯ ಭಾಗ ವೇಗವಾಗಿ ಓಡಿ ಜಿಂಕೆಯನ್ನು ಹಿಡಿದ್ದಿದ್ದಕ್ಕಾಗಿ ನನ್ನ ಪಾಲು, ಇನ್ನು ನಾಲ್ಕನೇ ಪಾಲನ್ನು ಮುಟ್ಟುವ ಧೈರ್ಯ ನಿಮ್ಮಲ್ಲಿ ಯಾರಿಗಾದರು ಇದ್ದಾರೆ ಮುಂದೆ ಬನ್ನಿ ನೋಡೋಣ” ಎಂದು ತನ್ನ ನ್ಯಾಯವನ್ನು ಘೋಷಿಸಿತು.

ಆಗ ನರಿ ತನ್ನ ಬಾಲವನ್ನು ಹಿಂಬದಿಯ ಕಾಲುಗಳ ನಡುವೆ ಸಿಕ್ಕಿಸಿ ಕೊಂಡು, ಗುಳ್ಳೆನರಿ ಹಾಗು ತೋಳದೊಡನೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಡಿನ ಹಾದಿ ಹಿಡಿಯುತ್ತ , “ದೊಡ್ಡವರ ಜೊತೆ ಕೆಲಸ ಹಂಚಿಕೊಬಹುದು, ಆದರೆ ಫಲ ಹಂಚಿ ಕೊಳ್ಳೋಕಾಗಲ್ಲ” ಎಂದು ಗೊಣಗಿಕೊಂಡಿತು.

Read Full Post »

lion.gif

 ಕುರುಮರಿಯೊಂದನ್ನು ಕದ್ದ ತೋಳ, ಅದನ್ನು ಜೋಪಾನವಾಗಿ ತನ್ನ ಮನೆಗೆ ಕೊಂಡೊಯ್ದು ವಾರಗಟ್ಟಲೆ ತಿನ್ನಬಹುದೆಂದು ಯೊಚಿಸಿ, ಕುರಿಮರಿಯನ್ನು ಎಳೆದೊಯ್ಯುತಿದ್ದಾಗ ಮಾರ್ಗ ಮಧ್ಯದಲ್ಲಿ ಸಿಂಹವೊಂದು ಎದುರಾಗಿ ತೋಳನ ಯೊಚನೆಗಳೆಲ್ಲ ತಲಕೆಳಕಾಗಿಸಿತ್ತು. ಹಸಿದಿದ್ದ ಸಿಂಹ ಕಾರಣವನ್ನೇನೂ ಕೊಡದೆ ಕುರಿಮರಿಯನ್ನು ತೋಳನಿಂದ ಕಸಿದುಕೊಂಡು ತಿನ್ನಲಾರಂಭಿಸಿತು. ಹೆದರಿದ ತೊಳ ಸಿಂಹ ನಿಂದ ಸುಮಾರು ದೂರಸರಿದು, ಮುನಿಸಿಕೊಂಡ ದನಿಯಲ್ಲಿ, “ನನ್ನ ಆಸ್ತಿಯನ್ನು ಕಸಿದುಕೊಳ್ಳುವುದಕ್ಕೆ ನಿನಗೇನು ಹಕ್ಕಿರಲಿಲ್ಲ” ಎಂದಿತು. ಇದನ್ನು ಕೇಳಿದ ಸಿಂಹ ತೋಳನೆಡೆಗೆ ದುರುಗುಟ್ಟಿ ನೋಡಿತು, ಸರಿಯಾಗಿ ಬುದ್ದಿಕಲಿಸೋಣವೆಂದರೆ ತೋಳ ತುಂಬಾ ದೂರದಲ್ಲಿ ನಿಂತಿದ್ದರಿಂದ, ತೊಂದರೆತೆಗೆದುಕೊಳ್ಳದೆ ಅನಾಯಾಸವಾಗಿ ಹೇಳಿತು, “ಇದು ನಿನ್ನ ಆಸ್ತಿಯೆ? ನೀನೇನು ಇದನ್ನು ಕೊಂಡುಕೊಂಡೆಯಾ? ಅಥವಾ ರೈತ ನಿನಗೆ ಉಡುಗೊರೆಯಾಗಿ ನೀಡಿದನೇ? ಹೇಳಪ್ಪ ಹೇಳು ನಿನಗೆ ಈ ಆಸ್ತಿ ಹೇಗೆ ಸಿಕ್ಕಿತು ಎಂದು ಹೇಳು”. ತೋಳ ಮರುಮಾತಿಲ್ಲದೆ ತನ್ನ ಹಾದಿ ತಾನು ಹಿಡಿಯಿತು.

ನೀತಿ: ಮೋಸದಿಂದ ಸಿಕ್ಕಿದ್ದು ಮೋಸದಿಂದಲೇ ಹೋಯಿತು.

Read Full Post »

crab.jpg 

ಏಡಿಮರಿ ನಡಿಯುತ್ತಿರುವದನ್ನು ನೋಡಿ, “ಯಾಕೊ ಹಾಗೆ ಸೊಟ್ಟ ಕಾಲು ಹಾಕ್ಕೊಂಡು ಒಂದು ಪಕ್ಕಾ ವಾಲಿಕೊಂಡು ನಡಿತೀಯಾ, ಯಾವಾಗಲೂ ನೇರವಾಗಿ ಹೆಜ್ಜೆಹಾಕಬೇಕು ಕಾಲಿನ ಬೆರಳುಗಳನ್ನು ಹೊರಗೆ ಚಾಚಿರಬೇಕು” ಎಂದು ಅಮ್ಮ ಏಡಿ ತನ್ನ ಮಗನಿಗೆ ಬುದ್ದಿ ಹೇಳಿದಾಗ,

 “ಪ್ರೀತಿಯ ಅಮ್ಮ, ಹೇಗೆ ನಡೀಬೇಕು ಅಂತ ಸ್ವಲ್ಪ ತೋರಿಸ್ತಿಯಾ, ನಿನ್ನನ್ನು ನೋಡಿ ನಾನು ನಡೆಯುವುದನ್ನು ಕಲಿತುಕೊಳ್ಳುತ್ತೇನೆ” ಎಂದು ಏಡಿಮರಿ ಅಮ್ಮನಿಗೆ ಉತ್ತರಿಸಿತು.

ಸರಿ ಎಂದು ಅಮ್ಮ ಏಡಿ ತಾನು ಹೇಳಿದಂತೆ ನೇರವಾಗಿ ನಡೆಯಲು ಪ್ರಯತ್ನಿಸಿತು, ಆದರೆ ಏನೂ ಪ್ರಯೊಜನವಾಗಲಿಲ್ಲ, ಮಗ ಏಡಿ ಹೇಗೆ ಒಂದು ಕಡೆ ವಾಲಿಕೊಂಡು ನಡೆದಾಡುತಿತ್ತೊ  ಹಾಗೆ ಅಮ್ಮ ಏಡಿ ಕೂಡ ನಡೆಯಿತು. ಅಮ್ಮ ಏಡಿ ಇನ್ನೂ ಮುಂದುವರೆಸಿ ತನ್ನ ಕಾಲ ಬೆರಳುಗಳನ್ನು ಹೊರಕ್ಕೆ ಚಾಚಲು ಪ್ರಯತ್ನಿಸಿ ಮಕಾಡೆ ಮುಗ್ಗರಿಸಿ ಬಿತ್ತು.

ನೀತಿ:  ಬೇರೆಯವರಿಗೆ ಬುದ್ದಿ ಹೇಳುವ ಮೊದಲು ಹೇಳಿದ್ದನ್ನು ಸ್ವತಃ ಮಾಡಿತೊರಿಸಬಲ್ಲ ಶಕ್ತಿಯಿರಬೇಕು.

Read Full Post »

wolf.jpg

ಒಂದೂರಲ್ಲಿ ಒಂದು ಮೇಕೆ ಮರಿ ಇತ್ತು. ಆಗ ತಾನೆ ಮೂಡುತಿದ್ದ ತನ್ನ ಕೊಂಬಗಳನ್ನು ನೋಡಿ, ತಾನಾಗಲೇ ದೊಡ್ಡವನಾದೆ ಎಂದು ಜಂಬದಿಂದ ಮೆರೆದಿತ್ತು. ಒಂದು ದಿನ ಸಂಜೆ, ಹುಲ್ಲು ಮೇಯ್ದಾದ ನಂತರ ಎಲ್ಲಾ ಮೇಕೆಗಳು ಮನೆಯಕಡೆ ಹೊರಟವು. ತಾಯಿ ಮೇಕೆ ಮನೆಗೆ ಹೊಗಲು ಕರೆದದ್ದು ಕೇಳಿಸಿದರೂ ಕೇಳಿಸದಂತೆ, ಇನ್ನೂ ತಿನ್ನುತ್ತಿರುವಂತೆ ನಟಿಸಿತು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡಿದರೆ, ಎಲ್ಲ ಮೇಕೆಗಳೂ ಆಗಲೇ ಮನೆಗೆ ಹೊರಟುಹೋಗಿದ್ದವು. ಮರಿ ಮೇಕೆಯೊಂದೆ ಹಿಂದೆ ಉಳಿದಿತ್ತು, ಸೂರ್ಯ ಆಗಲೆ ಮುಳುಗಲು ತಯಾರಿ ನಡೆಸಿದ್ದ, ಮರಗಳ ಉದ್ದುದ್ದ ನೆರಳನ್ನು ನೋಡಿ, ತೋಳನ ಭೀತಿಯಿಂದ ತರತರನೆ ನಡುಗಲಾರಂಭಿಸಿತು ಮೇಕೆ ಮರಿ. ಹೆದರಿಕೆಯಿಂದಲೇ ಅಮ್ಮಾ ಅಮ್ಮಾ ಎಂದು ಕೂಗುತ್ತಾ ಮನೆಯದಾರಿ ಹಿಡಿಯಿತು. ಮಾರ್ಗ ಮಧ್ಯದಲ್ಲಿ ಗಿಡಗಳ ಪೊದೆಯಿಂದ ತೋಳವೊಂದು ದುತ್ತನೆ ಮೇಕೆ ಮರಿಯ ಎದುರಿಗೆ ಬಂದು ನಿಂತಿತು. ತೋಳನನ್ನು ನೊಡಿದ ಮೇಕೆ ಮರಿ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಗುವ ದನಿಯಲ್ಲಿ, ತೋಳಣ್ಣ ನನ್ನನ್ನು ತಿನ್ನುವ ಮೊದಲು, ನಿನ್ನ ತುತ್ತೂರಿಯ ದನಿಗೆ ನನ್ನ ಕಾಲು ನೋಯುವಷ್ಟು ನೃತ್ಯ ಮಾಡಬೇಕೆಂಬದು ನನ್ನ ಕೊನೆ ಆಸೆ, ದಯವಿಟ್ಟು ನೆರೆವೇರಿಸಿಕೊಡುತ್ತೀಯಾ ಎಂದಿತು. ತೋಳನಿಗೂ ಮೇಕೆ ಮರಿಯನ್ನು ತಿನ್ನುವ ಮೊದಲು ಸ್ವಲ್ಪ ಮನರಂಜನೆ ಇರಲಿ ಎನಿಸಿ, ಆಗಲಿ ನಿನ್ನ ಆಸೆಯನ್ನು ನೆರವೇರಿಸುತ್ತೇನೆ ಎಂದು ಮೇಕೆ ಮರಿಗೆ ಹೇಳಿ, ತನ್ನ ತುತ್ತೂರಿ ತೆಗೆದು ನಿಧಾನವಾಗಿ ತಾನು ಊಟಮಾಡುವ ಮೊದಲು ಬಾರಿಸುವ ರಾಗವನ್ನು ಬಾರಿಸತೊಡಗಿತು.

ಇತ್ತ, ಮನೆಯ ಹಾದಿ ಹಿಡಿದಿದ್ದ ಮೇಕೆಗಳ ಗುಂಪು ತುಂಬಾ ಹೆಚ್ಚು ದೂರ ಹೋಗಿರಲಿಲ್ಲ, ಕುರುಬನ ನಾಯಿಗಳು ತೋಳನ ತುತ್ತೂರಿಯ ರಾಗವನ್ನು ಗುರುತಿಸಿ, ತೋಳ ಯಾವುದೊ ಮೇಕೆಯನ್ನು ಹಿಡಿದಿರಬೇಕೆಂದು ಒಡನೆಯೆ ಶಬ್ಧಬಂದ ಕಡೆ ನಾಯಿಗಳು ನುಗ್ಗಿದವು. ಇದ್ದಕ್ಕಿದ್ದಂತೆ ನಾಯಿಗಳ ದಾಳಿಯನ್ನು ಕಂಡು, ತೋಳ ತುತ್ತೂರಿಯನ್ನು ನಿಲ್ಲಿಸಿ ತನ್ನ ಕಾಲಿಗೆ ಬುದ್ದಿಹೇಳಿತು. ಜೀವ ಉಳಿಸಿಕೊಂಡ ತೋಳ, ಮೇಕೆ ಮರಿ ಕಂಡ ತಕ್ಷಣ ಮೊದಲು ಅದನ್ನು ತಿನ್ನದೇ,  ತುತ್ತೂರಿ ಊದಿದ್ದಕ್ಕೆ ತನ್ನನ್ನು ತಾನೇ ಹಳಿದು ಕೊಂಡಿತು. ಇತ್ತ ಮೇಕೆ ಮರಿ ಮತ್ತೆ ಯಾವತ್ತೂ ಜಂಬ ಮಾಡದೇ, ತನ್ನ ತಾಯಿಯೊಡನೆ ಇರುವುದನ್ನು ಕಲಿಯಿತು.

ನೀತಿ: ನಾವು ಮಾಡಬೇಕಾದ ಕಾರ್ಯದಿಂದ ನಮ್ಮನ್ನು ಬೇರೆ ಯಾವುದೇ ಕಾರಣಗಳು ತಡೆಯಬಾರದು.

Read Full Post »

ducks-and-tortoise.jpg 

ನಿಮಗೆ ಗೊತ್ತೆ, ಅಮೆ ತನ್ನ ಮನೆಯನ್ನು ತನ್ನ ಬೆನ್ನ ಮೇಲೆ ಯಾವಗಲೂ ಹೊತ್ತು ತಿರುಗುತ್ತದೆ. ಅದು ಎಷ್ಟು ಪ್ರಯತ್ನಿಸಿದರೂ ಮನೆಯನ್ನು ಬಿಟ್ಟು ಇರಲಾರದು. ಒಮ್ಮೆ ಜ್ಯೂಪಿಟರ್ (ಗುರು ಗ್ರಹ) ಮದುವೆಗೆ ಅಮೆಗೆ ಅಮಂತ್ರಣ ಕಳಿಸಿದ್ದರೂ, ಅಮೆ ಮದುವೆಗೆ ಹೊಗದೆ ಸೋಮಾರಿಯಾಗಿ ಮನೆಯಲ್ಲೇ ಕುಳಿತಿತ್ತಂತೆ ಅದಕ್ಕೆ ಗುರು ಕೊಂಪಗೊಂಡು ನೀನು ಎಲ್ಲೇ ಹೊದರೂ ನಿನ್ನ ಮನೆಯನ್ನು ಜೊತೆಗೆ ಕರೆದೊಯ್ಯಿ ಎಂದು ಅಮೆಗೆ ಶಾಪ ಕೊಟ್ಟನಂತೆ.

ಬಹಳ ವರುಷಗಳ ನಂತರ, ಆಮೆಗೆ ಅಯ್ಯೊ ನಾನು ಗುರುವಿನ ಮದುವೆಗೆ ಹೋಗಬೇಕಾಗಿತ್ತು, ಹೊಗಿದ್ದರೆ ನಾನೂ ಮೊಲದ ಹಾಗೆ ವೇಗವಾಗಿ ಓಡಾಡಬಹುದಿತ್ತು, ಇಡೀ ಪ್ರಪಂಚವನ್ನು ಸುತ್ತಬಹುದಿತ್ತು. ಆಮೆಗೆ ತಾನೂ ಇಡೀ ಪ್ರಪಂಚವನ್ನು ಸುತ್ತಬೇಕೆಂಬ ಆಸೆ ಅದರೆ ತನ್ನ ಮನೆಯನ್ನು ಬೆನ್ನ ಮೇಲೆ ಮನೆಯನ್ನು ಹೊತ್ತುಕೊಂಡು ಪ್ರಪಂಚವನ್ನು ಎಲ್ಲಿ ಸುತ್ತಲು ಸಾದ್ಯ ಎಂದು ನಿರಾಶೆಯಾಯಿತು.

ಹೀಗಿರಬೇಕಾದರೆ ಒಂದು ದಿನ ಅಮೆಗೆ ಎರಡು ಬಾತುಕೋಳಿಗಳ ಪರಿಚಯವಾಯಿತು. ಆಮೆ ಬಾತುಕೋಳಿಗಳಿಗೆ ತನ್ನ ದುಃಖವನ್ನು ಹೇಳಿಕೊಂಡಿತು. ಅದಕ್ಕೆ ಬಾತುಕೋಳಿಗಳು, ನೀನೇನು ಯೋಚನೆ ಮಾಡಬೇಡ, ನಾವು ನಿನಗೆ ಸಹಾಯ ಮಾಡುತ್ತೇವೆ ಎಂದವು. ಅಲ್ಲಿಯೆ ಬಿದ್ದಿದ ಒಂದು ಕೋಲನ್ನು ತೋರಿಸಿ, ನಿನ್ನ ಬಾಯಿಂದ ಈ ಕೋಲನ್ನು ಕಚ್ಚಿ ಹಿಡಿದುಕೊ, ನಾವಿಬ್ಬರೂ ಈ ಕೋಲನ್ನು ಹಿಡಿದುಕೊಂಡು ಆಕಾಶದಲ್ಲಿ ಹಾರಿ, ನಿನಗೆ ಇಡೀ ಪ್ರಪಂಚವನ್ನು ತೋರಿಸುತ್ತೇವೆ. ಆದರೆ ಒಂದು ನೆನಪಿನಲ್ಲಿಡು, ಯಾವುದೇ ಕಾರಣಕ್ಕೂ ಮಾತಾಡಲು ಬಾಯಿತೆರೆಯಬೇಡ ಎಂದು ಬಾತುಕೋಳಿಗಳು ಹೇಳಿದ್ದನ್ನು ಕೇಳಿ, ಸಂತೋಷದಿಂದ ಅಮೆ ಅವರು ಹೇಳಿದ್ದಕ್ಕೆ ಒಪ್ಪಿಗೆಸೂಚಿಸಿತು.

ಆಮೆ ತನ್ನ ಬಾಯಿಂದ ಕೋಲನ್ನು ಕಚ್ಚಿ ಹಿಡಿಯಿತು, ಬಾತುಕೋಳಿಗಳು ಕೋಲಿನ ಎರಡು ತುದಿಗಳನ್ನು ಹಿಡಿದುಕೊಂಡು ಆಕಾಶಕ್ಕೆ ಹಾರಿದವು. ಆಗ ಅದೇ ತಾನೆ ಅಲ್ಲಿ ಹಾರುತಿದ್ದ ಕಾಗೆಯೊಂದು ಈ ದೃಶ್ಯವನ್ನು ನೊಡಿ, “ಖಂಡಿತ ಇದು ಅಮೆಗಳಿಗೆಲ್ಲಾ ರಾಜನಿರಬೇಕು” ಎಂದು ಉದ್ಗರಿಸಿತು. ಇದನ್ನು ಕೇಳಿಸಿಕೊಂಡ ಆಮೆ ಸುಮ್ಮನಿರಲಾರದೆ “ಯಾಕೆ ಖಂಡಿತವಾಗಿ…” ಎಂದು ಮಾತಾಡಲಾರಂಬಿಸಿದಾಗ ಕೋಲಿನ ಹಿಡಿತ ತಪ್ಪಿ ದೊಪ್ಪೆಂದು ಕೆಳಗೆ ಬಿದ್ದು ಸತ್ತು ಹೋಯಿತು.

ನೀತಿ: ಮೂರ್ಖ ಕುತೂಹಲ ಮತ್ತು ಜಂಬ ನಮ್ಮನ್ನು ದುರದೃಷ್ಟದತ್ತ ನೂಕುತ್ತವೆ.

Read Full Post »

Older Posts »