Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಆಧುನಿಕ ನೀತಿ ಕತೆಗಳು’ Category

ಪುಟ್ಟಿ ಮಾಡಿದ ಸಣ್ಣ ತಪ್ಪಿಗೆ, ಅವರಮ್ಮ ಕೋಪಾ ಮಾಡಿಕೊಂಡು, ಪುಟ್ಟಿಗೆ ” ನಿನ್ನ ರೂಮಿನಲ್ಲಿರುವ ಕುರ್ಚಿಯಲ್ಲಿ ನಾನು ಹೇಳುವವರೆಗೂ ಕೂತಿರಬೇಕು, ಗೊತ್ತಾಯ್ತಾ” ಎಂದು ಅಪ್ಪಣೆ ಹೊರಡಿಸಿದರು, ಪುಟ್ಟಿ, ಮುಖ ಉಮ್ ಮಾಡಿ “ಗೊತ್ತಾಯ್ತು” ಎಂದು ರೂಮಿನೆಡೆಗೆ ನಡೆದಳು.

ಸ್ವಲ್ಪ ಹೊತ್ತು ಕಳೆದ ನಂತರ, ಪುಟ್ಟಿಯ ರೂಮಿಂದ “ಅಮ್ಮಾ ಈಗ ಹೊರಗೆ ಬರ್ಲಾ?” ಪುಟ್ಟಿಯ ದ್ವನಿ ಹೊರಗೆ ಬಂತು.

ಇನ್ನು ಕೋಪದಲ್ಲಿದ್ದ ಅಮ್ಮ, “ಇನ್ನು ಬೇಡ, ಅಲ್ಲೇ ಇರು” ಎಂದು ಉತ್ತರಿಸಿದರು.

ಅದಕ್ಕೆ ಪುಟ್ಟಿ ಜವಾಬು, “ಸರಿ ಅಮ್ಮ, ನಾನು ಯಾಕೆ ಕೇಳ್ದೆ ಅಂದ್ರೆ, ನಿನ್ನ ಜಂಬದ ಟೋಪಿ ನನ್ನ ಕುರ್ಚಿ ಮೇಲಿತ್ತು, ಅದರ ಮೇಲೆ ನಾನು ಕೂತಿದ್ದೀನಿ ಅದಕ್ಕೆ ಕೇಳ್ದೆ” !!

ನೀತಿ: ಮಕ್ಕಳಿಗೆ ಶಿಕ್ಷೆ ನೀಡುವ ಮುನ್ನ ಸ್ವಲ್ಪ ಯೋಚಿಸಿ!

ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

Read Full Post »

ನಗರದ ಪ್ರಖ್ಯಾತ ಕಳ್ಳನಿಗೆ ಹೊಸ ಚಿಂತೆಯೊಂದು ಶುರುವಾಯಿತು. ತನ್ನ ಎಳೆಯ ಮಗ ಇನ್ನೂ ಕಳ್ಳತನವನ್ನು ಕಲಿಯುವುದರಲ್ಲಿ ಯಾವ ಆಸಕ್ತಿಯನ್ನೂ ತೋರಿರಲಿಲ್ಲ, ಹೀಗೆ ಮುಂದುವರೆದರೆ ತನ್ನ ಮರಣಾನಂತರ ಮಗ ಹೇಗೆ ಬದುಕಬಲ್ಲ, ಎಂಬ ಚಿಂತೆ ಕಾಡತೊಡಗಿತು.

ಒಂದು ದಿನ ರಾತ್ರಿ, ಕಳ್ಳತನಕ್ಕೆಂದು ಹೊರಡುವ ಮುನ್ನ ಕಳ್ಳ ತನ್ನ ಮಗನನ್ನು ತನ್ನ ಜೊತೆ ಕರೆದುಕೊಂಡು ಹೊರಟ. ನಗರದ ಮಧ್ಯ ಭಾಗದಲ್ಲಿದ್ದ ಸಾಹುಕಾರನೊಬ್ಬನ ಮನೆಯನ್ನು ದೋಚಲು, ಸಾಹುಕಾರನ ಮನೆಯ ಹಿಂಬಾಗದ ಪೊದೆಯಲ್ಲಿ ಅಪ್ಪ ಮಗ ಅವಿತು ಕುಳಿತು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ರಸ್ತೆಯಲ್ಲಿನ ಸಂಚಾರ ಕಡಿಮೆಯಾಗಿ, ಸಾಹುಕಾರನ ಮನೆಯಲ್ಲಿನ ಎಲ್ಲರೂ ನಿದ್ರೆಯಲ್ಲಿ ಮಲಗಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ, ಅಪ್ಪಾ ಮಗ ಇಬ್ಬರೂ ಸೇರಿ, ಮನೆಯ ಹೊರಗಡೆ ಒಂದು ಸಣ್ಣ ಸುರಂಗವನ್ನು ತೋಡಲಾರಂಭಿಸಿದರು. ಬಹಳ ಕಷ್ಟ ಪಟ್ಟು ಸುರಂಗವನ್ನು ಮನೆಯ ಒಳಗೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮನೆಯ ಒಳಗೆ, ಚಿನ್ನ, ಬೆಳ್ಳಿ, ವಜ್ರ, ಮುತ್ತು, ಹವಳ, ರಾಶಿ ರಾಶಿ ಬಿದ್ದಿದ್ದವು. ಅಪ್ಪ ತನ್ನ ಕೈಗೆ ಸಿಕ್ಕಿದ್ದಷ್ಟನ್ನು ದೋಚಿ ಕೊಂಡು, ಮೆಲ್ಲಗೆ ಸದ್ದಾಗದ ಹಾಗೆ ಸುರಂಗದ ಬಳಿಗೆ ಬಂದನು. ಮಗ ಇನ್ನು ಕೈಗೆ ಸಿಕ್ಕಿದ್ದನ್ನು ತುಂಬಿಕೊಳ್ಳುವುದರಲ್ಲೇ ಮಗ್ನನಾಗಿದ್ದು, ಅಪ್ಪ ಹೋದದ್ದು ಅವನ ಗಮನಕ್ಕೆ ಬರಲೇ ಇಲ್ಲಾ. ತನ್ನ ಚೀಲ ಎತ್ತಿಕೊಂಡು ಹೊರಡಲು ನೋಡುತ್ತಾನೆ, ಅಪ್ಪ ಅಲ್ಲಿ ಇರಲಿಲ್ಲ. ಅಷ್ಟರಲ್ಲಿ ಹೊರಗಡೆ ತನ್ನ ಅಪ್ಪ ಜೋರಾಗಿ ಕೂಗಿ ಎಲ್ಲರನ್ನು ಏಳಿಸಲು ಪ್ರಯತ್ನಿಸುತಿದ್ದುದನ್ನು ಕೇಳಿ ಮಗನಿಗೆ ತುಂಬಾ ಕೋಪಾ ಬಂತು. ಅದರ ಬಗ್ಗೆ ಏನೂ ಮಾಡುವಂತಿರಲಿಲ್ಲ ವಾದರೂ, ತನ್ನಲ್ಲೇ ಧೈರ್ಯ ತಂದು ಕೊಂಡು ಇಲ್ಲಿಂದ ಪಾರಾಗುವ ಬಗ್ಗೆ ಆಲೋಚಿಸಲಾರಂಭಿಸಿದ.

ಸದ್ದು ಗದ್ದಲದಿಂದ ಎಚ್ಚರ ಗೊಂಡ ಸಾಹುಕಾರ, ಕಳ್ಳನನ್ನು ಹುಡುಕಾಲು ಆರಂಭಿಸಿದ್ದು ಮಗನ ಅರಿವಿಗೆ ಬಂತು. ಮಗ ಸುತ್ತಲೂ ಗಮನಿಸಿದ, ಅಲ್ಲೊಂದು ದೊಡ್ಡ ಖಾಲಿ ಪೆಟ್ಟಿಗೆ ಬಾಯಿ ತೆರೆದಿತ್ತು. ತಟ್ಟನೆ ಹೋಗಿ ಅದರೊಳಗೆ ಕುಳಿತು, ಸದ್ದಾಗದಂತೆ ಮೆಲ್ಲಗೆ ಪೆಟ್ಟಿಗೆಯ ಬಾಯಿ ಮುಚ್ಚಿ ಒಳಗೆ ಸದ್ದು ಮಾಡದೆ ಕುಳಿತ.

ಸಾಹುಕಾರ ಕೈಯಲ್ಲಿ ದೀಪ ಹಿಡಿದು ಕಳ್ಳನನ್ನು ಹುಡುಕುತ್ತಾ ಕೋಣೆಯೊಳಗೆ ಬಂದನು. ಮಗ ಅವಿತಿದ್ದ ಪೆಟ್ಟಿಗೆಯ ಬಾಯಿಯನ್ನು ತೆರೆದನು, ತಕ್ಷಣ ಮಗ ಸಾಹುಕಾರನ ಮೇಲೆ ಆಕ್ರಮಣ ಮಾಡಿ, ದೀಪವನ್ನು ಆರಿಸಿ, ಸುರಂಗದೆಡೆಗೆ ಓಡಿದ. ಸಾಹುಕಾರ ಆತನನ್ನು ಅಟ್ಟಿಸಿಕೊಂಡು ಓಡಿದ. ಮಿಂಚಿನ ವೇಗದಲ್ಲಿ ಓಡಿದ ಮಗ ಸುರಂಗದೊಳಗೆ ಇಳಿದು, ಸುರಂಗದಿಂದ ಹೊರಬಂದ ಮೇಲೆ, ಪಕ್ಕದಲ್ಲಿ ಇದ್ದ ಭಾವಿಯಲ್ಲಿ ದೊಡ್ಡದೊಂದು ಕಲ್ಲನ್ನು ದೂಡಿದ, ಭಾವಿಯಲ್ಲಿ ಬಿದ್ದ ಕಲ್ಲು ದೊಪ್ಪನೆ ಸದ್ದು ಮಾಡಿದ್ದನ್ನು ಕೇಳಿದ ಸಾಹುಕಾರ ಕಳ್ಳ ಭಾವಿಯಲ್ಲಿ ಬಿದ್ದನೆಂದು, ಅಂಥಾ ಆಳವಾದ ಭಾವಿಯಲ್ಲಿ ಬಿದ್ದವನು ಉಸಿರುಗಟ್ಟಿ ಸತ್ತಿರಬೇಕು ಎಂದು ಕೊಂಡು ಮನೆಗೆ ವಾಪಸ್ಸು ಬಂದು ಬಾಗಿಲು ಭದ್ರಮಾಡಿ ಮಲಗಲು ತೆರಳಿದ.

ಮನೆಗೆ ಮರಳಿದ ಮಗನನ್ನು ಕಂಡ ಅಪ್ಪನಿಗೆ ಬಹಳ ಸಂತೋಷವಾಯಿತು. ಆದರೆ ಮಗ ಇನ್ನು ಕೊಪದಲ್ಲೇ ಇದ್ದು, “ನೀನು ಯಾಕೆ ಹಾಗೆ ಕಿರುಚಿ ಕೊಂಡೆ, ನನ್ನನ್ನ ಪೋಲಿಸಿಗೆ ಹಿಡಿದು ಕೊಡಲೆಂದೇ?” ಎಂದು ಕೇಳಿದ.
ಅದಕ್ಕೆ ಅಪ್ಪ, “ಮಗು ನಿನಗೆ ಕಳ್ಳತನವನ್ನು ಕಲಿಸಲು ಹಾಗೆ ಮಾಡಿದೆ, ನಿನಗೆ ಅಭಿನಂದನೆಗಳು, ಇನ್ನು ಮುಂದೆ ನಿನ್ನ ಬಗ್ಗೆ ನನಗೆ ಚಿಂತೆಯಿಲ್ಲ, ನೀನು ನಿನ್ನ ಕಾಲ ಮೇಲೆ ನಿಲ್ಲಬಲ್ಲೆ ಎಂಬ ಭರವಸೆ ಇಂದು ನನಗೆ ಬಂತು” ಎಂದನು.

Read Full Post »

ಒಮ್ಮೆ ವಯಸ್ಸಾದ ವೃದ್ದರು, ಕೆಲಸದಿಂದ ನಿವೃತ್ತರಾದ ಮೇಲೆ, ಒಂದು ಒಳ್ಳೆಯ ಜಾಗದಲ್ಲಿ ಮನೆ ಕೊಂಡುಕೊಂಡರೂ. ಇವರ ಮನೆಯ ಹತ್ತಿರದಲ್ಲೇ ಒಂದು ಶಾಲೆ ಇತ್ತು. ಬೇಸಿಗೆ ಕಳೆದು ಶಾಲೆ ಪುನರಾರಂಭವಾಯಿತು. ಶಾಲೆಯ ಮೂರು ತುಂಟ ಹುಡುಗರು, ಊಟವಾದ ಮೇಲೆ, ಪಕ್ಕದಲ್ಲಿದ್ದ ತಾತನ ಮನೆಯ ಮುಂದೆ ಇದ್ದ ಕಸದ ಡಬ್ಬವನ್ನು ಒದೆಯುವುದು, ಬಡಿಯುವುದು ಮಾಡುತಿದ್ದರು. ಕಸದ ಡಬ್ಬ ತುಂಟ ಹುಡುಗರ ತಬಲವಾಗಿತ್ತು.

ಗಲಾಟೆಯಿಂದ ಬೇಸತ್ತ ತಾತ, ಇವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿ, ಮಾರನೆ ದಿನ ಹುಡುಗರು ಬರುವುದನ್ನೇ ಕಾಯುತಿದ್ದರು. ಹುಡುಗರು ಬಂದು ಎಂದಿನಂತೆ ತಬಲಾ ಬಾರಿಸಲಾರಂಬಿಸಿದಾಗ, ತಾತ ಹೊರಗಡೆ ಬಂದು, ಹುಡುಗರೊಡನೆ ಪರಿಚಯ ಮಾಡಿಕೊಂಡರು. ನಿಮ್ಮ ವಯಸ್ಸಿನವನಾಗಿದ್ದಾಗ ನಾನು ಹೀಗೆ ಮಾಡುತಿದ್ದೆ, ನೀವು ತಬಲಾ ಬಾರಿಸುವುದನ್ನು ಕೇಳುವುದೇ ಆನಂದ ಎಂದು ಹೇಳಿದರು. ಇನ್ನೂ ಮುಂದುವರೆದು, ಇನ್ನೂ ಮುಂದೆ ನೀವು ದಿನಾ ಇಲ್ಲಿ ಬಂದು ತಬಲಾ ಬಾರಿಸುವುದಾದರೆ ನಿಮಗೆ ದಿನಕ್ಕೆ ಒಬ್ಬೊಬ್ಬರಿಗೆ ಒಂದು ರೂಪಾಯಿ ಕೊಡುತ್ತೇನೆ ಎಂದರು. ಹುಡುಗರಿಗೋ ಆನಂದವೋ ಆನಂದ, ತಾತನ ಮಾತಿಗೆ ಒಪ್ಪಿ. ಪ್ರತಿದಿನ ಬಂದು ತಬಲಬಾರಿಸಿ, ಹಣ ಪಡೆದು ಹೋಗುತಿದ್ದರು.

ಒಂದು ವಾರವಾಯಿತು, ಆ ದಿನ ಹುಡುಗರು ಹಣ ಪಡೆಯಲು ಹೋದಾಗ, ತಾತ “ಮಕ್ಕಳೇ ನನಗೆ ಬರುತಿದ್ದ ಕಾಸು ಕಡಿಮೆಯಾಗಿದೆ. ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಐವತ್ತು ಪೈಸೆ ಮಾತ್ರ ಕೊಡಬಲ್ಲೆ” ಎಂದರು. ಮಕ್ಕಳ ಮುಖ ಸಪ್ಪಗಾಯಿತು, ಆದರೂ ಸಿಕ್ಕಷ್ಟೇ ಲಾಭ ಎಂದು ಒಪ್ಪಿಕೊಂಡರು.

ಮತ್ತೊಂದುವಾರ ಕಳೆಯಿತು, ಹುಡುಗರು ಹಣ ಪಡೆಯಲು ಹೋದಾಗ, ತಾತ, ಮಕ್ಕಳೇ ನಿಮಗೆ ಕಡಿಮೆ ಕಾಸು ಕೊಡಲು ನನಗೂ ಇಷ್ಟವಿಲ್ಲ ಆದರೂ ನನಗೆ ಬರುತಿದ್ದ ಕಾಸು ಮತ್ತೂ ಕಡಿಮೆಯಾಗಿದೆ, ಆದ್ದರಿಂದ ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಇಪ್ಪತ್ತೈದು ಪೈಸೆ ಮಾತ್ರ ಕೊಡಬಲ್ಲೆ ಎಂದರು.

ಆಗ ಮಕ್ಕಳ ಗುಂಪಿನ ನಾಯಕ ಹೇಳಿದ, “ಇಪ್ಪತ್ತೈದು ಪೈಸಾನ, ಅದಕ್ಕೆ ಕಳ್ಳೇಕಾಯಿ ಮಿಠಾಯಿನು ಬರಲ್ಲ, ಹೋಗು ತಾತ, ನಿನ್ನ ಇಪ್ಪತ್ತೈದು ಪೈಸೆಗೋಸ್ಕರ ನಾವು ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡೋಕ್ಕಾಗಲ್ಲ. ಇವತ್ತಿನಿಂದ ನಾವು ಇನ್ನೂ ಮುಂದೆ ತಬಲಾ ಬಾರಿಸುವುದಿಲ್ಲ.”

ಮಕ್ಕಳು ಹೊರಡುವಾಗ, ತಾತ ಹೊರಗಡೆ ತುಂಬಾ ಬೇಜಾರಾದಂತೆ ತೋರಿಸಿಕೊಂಡರೂ, ಒಳಗೊಳಗೆ ನಗುತ್ತಿದ್ದರು.

Read Full Post »