ನನ್ನಯ್ಯನಂತೋರು ಹನ್ನೆರಡು ಮಕ್ಕಳು
ಹೊನ್ನೇಯ ಮರದ ನೆರಳಾಗ | ಆಡುವಾಗ
ಸನ್ಯಾಸಿ ಜಪವ ಮರೆತಾನ
ತೊಟ್ಟಿಲಿನೊಳಗೆ ಪುಟ್ಟ ಕಂದ ಮಲಗ್ಯವನೆ
ಸೃಷ್ಟಿಗೊಡೆಯನ ಮಡದಿ | ಪಾರ್ವತಿ ದೇವಿ
ದೃಷ್ಟಿ ತಗಲ್ಯಾವು ತೆರೆ ಹಾಕ
ತೋಳುದ್ದ ತಲೆಗಿಂಬು ಮಾರುದ್ದ ಹಾಸೀಗಿ
ಮಾಣಿಕದಂತ ಮಗು ಮುಂದ | ಮಲಗಿದರ
ಮಾರಯ್ರ ಗೊಡವೆ ನನಗೇನ
ಹಸಿರಂಗಿ ತೊಡಸೀದ ಹಾಲ್ಗಡಗ ಇಡಸೀದ
ಹಳ್ಳಕ್ಕೆ ನೀನು ಬರಬೇಡ | ನನ ಕಂದ
ಬೆಳ್ಳಕ್ಕಿ ಹಿಂಡು ಬೆದರ್ಯಾವ
ಆಸರಿಕಿ ಬ್ಯಾಸರಿಕಿ ಯಾರಿಂದ ಕಳೆಯಾಲೆ
ಕೂಸು ಕಂದಯ್ಯ ತೊಡಿಮ್ಯಾಲೆ | ಆಡಿದರ
ಬಂದ ಬ್ಯಾಸರಿಕಿ ಬಯಲಾಗಿ
ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು | ಕಂದಯ್ಯ
ಜ್ಯೋತಿಯೇ ಆಗು ಜಗಕೆಲ್ಲ