ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬುದು ಅಕ್ಷರಶಃ ಅನುಭವದ ಮಾತು. ಮಗು ತನ್ನ ಮೊದಲ ದಿನಗಳನ್ನು ಕಳೆಯುವುದು ಮನೆಯಲ್ಲಿ, ತಾಯಿಯ ಆರೈಕೆಯಲ್ಲಿ. ಮನೆ ಮಗುವಿಗೆ ಸುರಕ್ಷತೆಯನ್ನು ಒದಗಿಸಿದರೆ, ತಾಯಿ ಮಗು ಮನೆಯಿಂರ್ದ ಹೊರಗೆ ಕಾಲಿಡುವ ಮೊದಲು, ಮಗುವಿನ ಆರೈಕೆ, ಮಗುವಿಗೆ ಮಾತು ಕಲಿಸುವುದು, ಒಳ್ಳೆಯ ನಡತೆಯನ್ನು ಕಲಿಸುವುದರಲ್ಲಿ ತೊಡಗುತ್ತಾಳೆ, ಈ ಕಾರಣದಿಂದ ಮಗುವಿಗೆ ಮನೆ ಮೊದಲ ಪಾಠಶಾಲೆಯಾದರೆ, ಪಾಠಶಾಲೆಯ ಗುರು ತಾಯಿ ಎಂಬುದರಲ್ಲಿ ಎರಡು ಮಾತಿಲ್ಲಾ.
ಹುಟ್ಟಿದ ಮಗು ಸ್ಪರ್ಶಜ್ನಾನದಿಂದ ಮಾತ್ರವೆ ತಾಯಿಯನ್ನು ಗುರುತಿಸಬಲ್ಲದು, ಹಸಿವಾದಾಗ ಅತ್ತರೆ ತಾಯಿ ಬಂದು ಹಾಲು ಕೊಡುತ್ತಾಳೆ ಎಂಬುದನ್ನು ಬಲ್ಲದು. ಎಳೆಯ ಮಗು ತಾಯಿಯ ಪೋಷಣೆಯಲ್ಲಿ ಬೆಳೆಯುತ್ತದೆ. ಇನ್ನೂ ಮಾತು ಕಲಿಯದಿದ್ದರೂ, ಮಗುವಿಗೆ ಪ್ರೀತಿಯ ಅರ್ಥವನ್ನು ತಾಯಿ ತನ್ನ ಆರೈಕೆಯಿಂದ ಮಗುವಿಗೆ ಅರ್ಥ ಮಾಡಿಸುತ್ತಾಳೆ. ಅಮ್ಮನ ತೋಳಿನಲ್ಲಿ, ಪ್ರೀತಿಯನ್ನು ಸವಿಯುತ್ತಾ, ಸಂತೋಷದಿಂದ ಬೆಳೆಯುವ ಮಗುವಿಗೆ, ಮನೆ ಒಂದು ಸುರಕ್ಷತೆಯ ಸ್ಥಳವಾಗಿ, ತಾಯಿ ಎಲ್ಲದಿರಿಂದ ರಕ್ಷಿಸುವ, ಪ್ರೀತಿಯ ದೇವತೆಯಾಗುತ್ತಾಳೆ.
ಮಗು ಸ್ವಲ್ಪ ಬೆಳೆದು, ಮಗುಚಿಕೊಂಡು ತೆವಳಲು ಆರಂಭಿಸಿದಾಗ, ತಾಯಿ ಮಗುವನ್ನು ಸುರಕ್ಷಿತವಾದ ಮಲಗಿಸಿ, ಅದು ಮಗುಚಿಕೊಂಡು ತೆವಳುವುದನ್ನು ನೋಡುತ್ತಾ, ಮಗು ಸುರಕ್ಷಿತವಾಗಿ ತೆವಳುವಂತೆ ನೋಡಿಕೊಳ್ಳುತ್ತಾಳೆ. ಮುಂದೆ ಮಗು ಅಂಬೆಗಾಲಿಡಲು ಆರಂಭಿಸಿದಾಗ, ಮತ್ತೆ ಸುರಕ್ಷಿತವಾಗಿ ಮಗು ಅಂಬೆಗಾಲಿಟ್ಟು ಒಡಾಡುವಂತೆ ನೋಡಿಕೊಳ್ಳುತ್ತಾಳೆ. ನಂತರ ತಾಯಿ ಮಗುವಿನ ಕೈಗಳನ್ನು ಹಿಡಿದು, ಅದರ ಕಾಲ ಮೇಲೆ ನಡೆಯುವುದನ್ನು ತೋರಿಸಿ, ಮತ್ತೆ ಮತ್ತೆ ನಡೆಸಿ ಮಗುವಿಗೆ ತಾನು ನಡಯಬಲ್ಲೆ ಎಂಬ ನಂಬಿಕೆ ಬೆಳಸುತ್ತಾಳೆ. ಒಂದು ದಿನ ಮಗು ತನಗೆ ತಾನೆ ನಡೆಯಲಾರಂಭಿಸುತ್ತದೆ. ಹಾಗೆ ನಡೆಯುವಾಗ ಬೀಳುವುದು ಸಹಜ. ಬಿದ್ದಾಗ ತಾಯಿ, ಮಗುವಿಗೆ ಆರೈಕೆ ಮಾಡಿ ಹುರಿದುಂಬಿಸಿ ಮತ್ತೆ ನಡೆಯುವ ಪ್ರಯತ್ನ ಮುಂದುವರೆಸುತ್ತಾಳೆ, ಮಗು ಸರಿಯಾಗಿ ನಡೆಯುವವರೆಗೂ ಮಗುವಿನ ಹಿಂದೆ ತಾಯಿ ಯಾವಗಲೂ ಇರುತ್ತಾಳೆ.
ಮಗು ಕೆಲದಿನಗಳಲ್ಲಿ ತನ್ನ ತೊದಲು ಮಾತನ್ನು ಆಡಲಾರಂಭಿಸುತ್ತದೆ. ತಾಯಿ ತೊದಲು ಮಾತಿನಲ್ಲಿ ಮಗುವಿನೊಡನೆ ಮಾತನಾಡುತ್ತ ಒಂದು ರೀತಿಯ ಸಂಬಂಧವನ್ನು ಬೆಸೆಯುತ್ತಾಳೆ. ಮಗುವಿನ ಭಾಷೆ ತಾಯಿಗೆ ಮಾತ್ರ ಅರ್ಥವಾಗುತ್ತದೆ. ಹೀಗೆ ಶುರುವಾದ ತೊದಲು ಮಾತನ್ನು, ತಿದ್ದಿ ಮಗುವಿಗೆ ಅಕ್ಷರ ಹಾಗು ಪದಗಳ ಅರ್ಥವನ್ನು ತಿಳಿಸುತ್ತಾ, ತೋರಿಸುತ್ತಾ ಕಲಿಸುತ್ತಾಳೆ. ಮಗು ಅಕ್ಷರವನ್ನಾಗಲಿ, ಪದಗಳನ್ನಾಗಲಿ ತಪ್ಪಾಗಿ ಉಚ್ಚರಿಸಿದಾಗ, ಅದನ್ನು ಸರಿಪಡಿಸಿ ಸರಿಯಾಗಿ ಉಚ್ಚರಿಸುವುದನ್ನು ತೋರಿಸಿಕೊಡುತ್ತಾಳೆ. ಮಗು ತನ್ನ ತಾಯಿಭಾಷೆಯನ್ನು ಸಹಜವಾಗಿ ನೋಡು ನೋಡುತ್ತಿದ್ದಂತೆ ಕಲಿತುಬಿಡುತ್ತದೆ.
ಮಗುವಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸುವುದು ತಾಯಿ. ಮಣ್ಣು ತಿನ್ನಬಾರದು, ಇತರ ಮಕ್ಕಳಿಗೆ ನೋವನ್ನು ಉಂಟು ಮಾಡಬಾರದು, ಕೈ ಕಾಲುಗಳನ್ನು ತೊಳೆದು ಶುದ್ದವಾಗಿಟ್ಟುಕೊಳ್ಳುವುದು, ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ಸ್ನಾನ ಮಾಡುವುದು, ಸರಿಯಾದ ಹೊತ್ತಿಗೆ ಊಟ ಮಾಡುವುದು, ಹಿರಿಯರಿಗೆ ಗೌರವ ತೋರಿಸುವುದು ಮುಂತಾದುವುಗಳನ್ನು ತಾಯಿ ಮನೆಯಲ್ಲಿಯೇ ಕಲಿಸುತ್ತಾಳೇ.
ಹೀಗೆ ಮಗು ಹುಟ್ಟಿದಂದಿನಿಂದ, ಶಾಲೆಗೆ ಹೋಗುವವರೆಗೂ, ಮನೆಯಲ್ಲಿಯೆ ತನ್ನ ಜೀವನಕ್ಕೆ ಅವಶ್ಯಕವಾದವುಗಳನ್ನು ತನ್ನ ತಾಯಿಯ ಮೂಲಕ ಕಲಿಯುತ್ತದೆ. ಮಗುವಿನ ನಡತೆ ಮನೆಯಲ್ಲಿಯೇ ರೂಪುಗೊಂಡಿರುತ್ತದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬಗಾದೆ, ಮನೆಯೇ ಪಾಠಶಾಲೆ, ತಾಯಿಯೇ ಮೊದಲಗುರು ಎಂಬುದನ್ನು ಸಮರ್ಥಿಸುತ್ತದೆ.
It’s very good and Important too