Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2016

ದಾಸ ಸಾಹಿತ್ಯ:
ದಾಸಕೂಟ ಎಂದರೆ ಸೇವಕರ ಗುಂಪು, ಶ್ರೀಹರಿಯ ಸೇವಕರ ಪಂಥಕ್ಕೆ ಸೇರಿದವನು ಎಂದು ವಾಚ್ಯಾರ್ಥ. ವೈದಿಕ ಸಂಪ್ರದಾಯದ ಕವಿಗಳಾದ ನರಹರಿತೀರ್ಥರಿಂದ ಹಿಡಿದು, ಶ್ರೀಪಾದರಾಯ, ಪುರಂದರ ದಾಸ, ಕನಕದಾಸರಾದಿ ಯಾಗಿ ಪ್ರಾಣೇಶರವರಗಿನ ಕವಿಗಳು ರಚಿಸಿದ ಶ್ರೀಹರಿಯನ್ನು ಕುರಿತಾದ ಸಾಹಿತ್ಯವನ್ನು ದಾಸಸಾಹಿತ್ಯ ಎನ್ನಬಹುದು. ಕೀರ್ತನೆಗಳು, ಪದಗಳು ದಾಸ ಸಾಹಿತ್ಯದ ಪ್ರಮುಖ ಕೃತಿಗಳಾಗಿರುತ್ತವೆ. ಹರಿನಾಮ ಸ್ಮರಣೆ ಹಾಗು ದ್ವೈತಮತದ ಪ್ರಚಾರ ದಾಸಸಾಹಿತ್ಯದ ಪ್ರಮುಖ ಗುರಿಗಳು. ಕರ್ನಾಟಕ ಸಂಗೀತಕ್ಕೆ ದಾಸಸಾಹಿತ್ಯದ ಕೊಡುಗೆ ಅಪಾರ. ಪುರಂದರದಾಸರನ್ನು ಕರ್ನಾಟಕ ಸಂಗೀತ ಮೂಲಪುರುಷ ಎನ್ನುತ್ತಾರೆ. ಇಂದಿಗೂ ಕರ್ನಾಟಕ ಸಂಗೀತವನ್ನು ಕಲಿಯುವವರು ಪುರಂದರದಾಸರ ಕೃತಿಗಳಿಂದಲೇ ತಮ್ಮ ಅಭ್ಯಾಸವನ್ನು ಆರಂಭಿಸುತ್ತಾರೆ.

ಪೀಠಿಕೆ:
೧೨ನೇ ಶತಮಾನದಲ್ಲಿ ನಡೆದ ಕೋಲಾಹಲಕರವಾದ ಧರ್ಮಕ್ರಾಂತಿ ಸನಾತನವಾದ ವೈದಿಕಮತವನ್ನು ಬುಡಮಟ್ಟ ಅಲ್ಲಾಡಿಸಿಬಿಟ್ಟಿತ್ತು. ಅದುವರೆಗೆ ವೈದಿಕ ಮತಾನುಯಾಯಿಗಳಾಗಿದ್ದವರು ತಂಡತಂಡವಾಗಿ ವೀರಶೈವ ಮತವನ್ನು ಆಲಂಗಿಸಿದುದನ್ನು ಕಂಡು ವೈದಿಕಮತವೇ ಅಳಿದುಹೋಗುವುದೆಂಬ ಭಯ ವೈದಿಕರನ್ನು ಕಾಡಿರಬಹುದು. ಕಾಕತಾಳೀಯವಾಗ ಇದೇ ಕಾಲದಲ್ಲಿ ಮಧ್ವಾಚಾರ್ಯರು ದ್ವೈತಮತವನ್ನು ಸ್ಥಾಪಿಸಿದರು. ಉಡುಪಿಯ ಸಮೀಪದಲ್ಲಿರುವ ಶಿವಳ್ಳಿಯಲ್ಲಿ ಜನಿಸಿದ ಮಧ್ವಾಚಾರ್ಯರು, ಅದ್ವೈತಮತಖಂಡನೆಯೊಡನೆ ದ್ವೈತಮತವನ್ನು ಸ್ಥಾಪಿಸಿ ನಾಡಿನಲ್ಲೆಲ್ಲಾ ದ್ವೈತಮತವನ್ನು ಪ್ರಚಾರಮಾಡುತ್ತಾ ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು. ಶಿವಶರಣರು ಕಾವ್ಯಮಯವಾದ ಗದ್ಯದಲ್ಲಿ ತಮ್ಮ ವಚನಗಳನ್ನು ಕಟ್ಟಿ ಹಾಡಿದರೆ, ಹರಿದಾಸರು ಹೃದಯವನ್ನು ಸೂರೆಗೊಳ್ಳಬಲ್ಲ ಕೀರ್ತನೆಗಳನ್ನು ಕಟ್ಟಿ ಹಾಡಿದರು. ಶಿವಶರಣರು ಶೂನ್ಯಸಿಂಹಾಸನ ಹಾಗು ಅನುಭವ ಮಂಟಪಗಳನ್ನು ಕಟ್ಟಿದರೆ, ಹರಿದಾಸರು ವ್ಯಾಸಕೂಟ ಹಾಗೂ ದಾಸಕೂಟ ಗಳನ್ನು ಸ್ಥಾಪಿಸಿದರು. ವಚನಕಾರರು ತಮ್ಮ ಇಷ್ಟದೈವವನ್ನು ತಮ್ಮ ವಚನಗಳಲ್ಲಿ ಅಂಕಿತವಾಗಿ ಬಳಸಿದರು. ಹಾಗೆಯೆ ಹರಿದಾಸರು ತಮ್ಮ ಕೀರ್ತನೆಯ ಚರಣದಲ್ಲಿ ತಮ್ಮ ಅಂಕಿತವನ್ನು ಹಾಕುವ ಸಂಪ್ರದಾಯವನ್ನು ರೂಢಿಗೆ ತಂದರು. ಸಂಸ್ಕೃತದಲ್ಲಿದ್ದ ಆಧ್ಯಾತ್ಮಿಕ ತತ್ವಗಳನ್ನು ಜನರ ಆಡುಮಾತಿನಲ್ಲಿ ಅಳವಡಿಸಿಕೊಂಡು, ಮನೆಮನೆಗೂ ಹಂಚುವ ಸತ್ಕಾರ್ಯದಲ್ಲಿ ಈ ಎರಡೂ ಬಗೆಯ ಸಾಹಿತ್ಯಗಳು ಸಮಾನ ಪ್ರಶಸ್ತಿಗೆ ಸಲ್ಲಬೇಕು. ನುಡಿದಂತೆ ನಡೆದು ದೊಡ್ಡ ಬಾಳನ್ನು ನಡೆಸಿದ ಈ ಸಂತ ಜೀವಿಗಳು ಜನರಲ್ಲಿ ದೈವಭಕ್ತಿಯನ್ನು ಪ್ರಚೋದಿಸಿ, ಸಮಾಜದ ಮೇಲಕ್ಕೆತ್ತುವುದರಲ್ಲಿ ಬಲುಮಟ್ಟಿಗೆ ಕಾರಣಕರ್ತರಾದರು.

ಮೂಲ
ದ್ವೈತ ಮತದ ಸ್ಥಾಪಕರಾದ ಮಧ್ವಾಚಾರ್ಯರೇ ದಾಸಪಂಥಕ್ಕೂ ಮೂಲಪುರುಷನೆಂದು ಹೇಳುತ್ತಾರೆ. ಮಧ್ವಾಚಾರ್ಯರು ಪಶ್ಚಿಮ ಸಮುದ್ರ ತೀರದಿಂದ ಉಡುಪಿಯವರೆಗೆ ಗೋಪಿಚಂದನದ ಗಡ್ಡೆಗಳನ್ನು ಹೊತ್ತು ತರುತ್ತಾ ’ಆನಂದ ಮುಕುಂದ ಅರವಿಂದನಯನ ಆನಂದತೀರ್ಥ ಪರಮಾನಂದವರದ” ಇತ್ಯಾದಿಯಾದ ದ್ವಾದಶಸೂತ್ರಗಳನ್ನು ಹಾಡಿದುದಾಗಿಯೂ ಹಾಗೂ ಅದರಿಂದಲೇ ದಾಸಸಾಹಿತ್ಯದ ಬೀಜ ಸ್ಥಾಪನೆಯಾದುದಾಗಿಯೂ ಹೇಳುತ್ತಾರೆ. ಆದರೆ ಕನ್ನಡದಲ್ಲಿ ದಾಸಸಾಹಿತ್ಯವನ್ನು ಮೊಟ್ಟಮೊದಲು ಕಟ್ಟಿ ಹಾಡಿದ ಕೀರ್ತಿ ನರಹರಿತೀರ್ಥರಿಗೆ ಸಲ್ಲಬೇಕು.
ನರಹರಿತೀರ್ಥರು (೧೨೮೦-೧೩೩೩) ಒರಿಸ್ಸಾ ದೇಶದ ಗಜಪತಿರಾಜನಲ್ಲಿ ಸ್ವಾಮಿಶಾಸ್ತ್ರಿಯೆಂಬ ಹೆಸರಿನಿಂದ ಅಧಿಕಾರಿಯಾಗಿದ್ದರು. ಮಧ್ವಾಚಾರ್ಯರು ಬದರಿಯಾತ್ರೆಯನ್ನು ಮುಗಿಸಿಕೊಂಡು ಒರಿಸ್ಸ ದೇಶಕ್ಕೆ ಬರಲು, ಅವರ ಪಾಂಡಿತ್ಯಕ್ಕೆ ಮನಸೋತ ಸ್ವಾಮಿಶಾಸ್ತ್ರಿ ಅವರ ಶಿಶ್ಯನಾಗಿ ನರಹರಿತೀರ್ಥನೆಂಬ ಹೆಸರಿನಿಂದ ಸನ್ಯಾಸ ಸ್ವೀಕರಿಸಿದನು. ಸಂಸ್ಕೃತದಲ್ಲಿ ಉದ್ದಾಮ ಪಂಡಿತನಾದ ನರಹರಿತೀರ್ಥರು, ಕನ್ನಡದಲ್ಲಿ ಹರಿಕೀರ್ತನೆಗಳನ್ನು ರಚಿಸಿ ತೀರ್ಥಯಾತ್ರೆ ಮಾಡುತ್ತಾ ದ್ವೈತಮತ ಪ್ರಚಾರ ಮಾಡಿದನಂತೆ. ಆತನು ಅನೇಕ ಕೃತಿಗಳನ್ನು ರಚಿಸಿದ್ದನೆಂದು ಹೇಳಿಕೆಯಿದ್ದರೂ, ಎರಡು ಕೀರ್ತನೆ ಮಾತ್ರ ಇದುವರೆಗೆ ಉಪಲಬ್ದವಾಗಿದೆ.

ಬೆಳವಣಿಗೆ
ದಾಸಸಾಹಿತ್ಯದಲ್ಲಿ ಚಾರಿತ್ರಿಕವಾಗಿ ನಾಲ್ಕು ಘಟ್ಟಗಳನ್ನು ಗುರುತಿಸಬಹುದು.
೧. ಮದ್ವಾಚಾರ್ಯರ ಕಾಲದಲ್ಲಿ ಅವರ ಶಿಷ್ಯಸಂಘವು ನರಹರಿತೀರ್ಥರ ನೇತೃತ್ವದಲ್ಲಿ ಪ್ರಕಟಮಾಡಿದ್ದು. ನರಹರಿತೀರ್ಥರು ಕನ್ನಡದಲ್ಲಿ ಪದಗಳನ್ನು ರಚಿಸಿ ದಾಸಕೂಟದ ಮೂಲಪುರುಷನೆಂದು ಪ್ರಸಿದ್ಧಿ ಪಡೆದಿದ್ದರೆ.
೨. ಕೃಷ್ಣದೇವರಾಯನ ಕಾಲದ ಪುರಂದರದಾಸ, ಕನಕದಾಸರು ವ್ಯಾಸರಾಯರ ಗುರುತ್ವದಲ್ಲಿ ಅಭಿವ್ಯಕ್ತಿಗೊಳಿಸಿದ್ದು.
೩. ವಿಜಯದಾಸ ಮುಂತಾದ ದಾಸವೃಂದವು ಸೃಷ್ಟಿಮಾಡಿದ್ದು.
೪ ಪ್ರಾಣೇಶ, ಗುರುಪ್ರಾಣೇಶ ಮುಂತಾದ ದಾಸರು ರಚಿಸಿದ್ದು.
ಮೊದಲನೇ ಗುಂಪಿನ ಪ್ರಭಾವವು ಸುಮಾರು ೩೦೦ ವರ್ಷಗಳವರೆಗೆ ಮೆರೆದಿದ್ದರೆ, ಎರಡನೆಗುಂಪು ಸುಮಾರು ೨೫೦ ವರ್ಷ ಬಾಳಿತು. ಮೂರನೇ ಗುಂಪು ಹುಟ್ಟಿದ ಸುಮಾರು ೬೦-೭೦ ವರ್ಷಗಳಾಗುವಷ್ಟರಲ್ಲಿ ಪ್ರಾಣೇಶ ಮುಂತಾದವರು ಅಲ್ಲಲ್ಲಿ ಉದಯಹೊಂದಿ ಪುರಂದರದಾಸ – ವಿಜಯದಾಸಾರ್ಯರ ಉಪದೇಶಗಳನ್ನು ಮತ್ತೆ ಜನರಿಗೆ ಬೋದಿಸಹತ್ತಿದರು.

ನಡೆದು ಬಂದ ದಾರಿ
೧೩ನೇಯ ಶತಮಾನದ ಕೊನೆಯಲ್ಲಿ ಬದುಕಿದ್ದ ನರಹರಿತೀರ್ಥರು ದಾಸಕೂಟದ ಮೂಲಪುರುಶರಾಗಿದ್ದರೂ, ಅವರ ತರುವಾಯ ೧೫ ನೇಯ ಶತಮಾನದ ಶ್ರೀಪಾದರಾಯರವರೆಗೆ ಯಾರ ಹೆಸರೂ ಕೇಳಿಬರುವುದಿ ಲ್ಲ. ದಾಸಕೂಟಕ್ಕೆ ಹಿರಿಯನೆಂದು ಕೀರ್ಥನಕಾರರು ನೆನೆದಿರುವುದನ್ನು ನೋಡಿದರೆ, ನರಹರಿತೀರ್ಥರ ಬದಲು ಶ್ರೀಪಾದರಾಯರನ್ನೇ ಮೊದಲಿಗರೆಂದು ಹೇಳಬಹುದು. ಕನ್ನಡದಲ್ಲಿ ಧಾರ್ಮಿಕ ಸಾಹಿತ್ಯವನ್ನು ರಚಿಸಬೇಕೋ ಬೇಡವೋ ಎಂಬ ಬಗ್ಗೆ ವೈದಿಕಕವಿಗಳ ಮನೋವೃತ್ತಿ ೧೫ ನೇಯ ಶತಮಾನದವರೆಗೂ ದೃಡವಾಗಿರಲಿಲ್ಲ. ವಿಜಯನಗರದ ಕಾಲದಲ್ಲಿ ಅದು ದೃಡವಾಯಿತು ಮಾತ್ರವಲ್ಲಾ ಒಂದು ಆಳವಾದ ಶ್ರದ್ದೆ ಬೇರೂರಿತು. ಅಂತೆಯೇ ಕುಮಾರವ್ಯಾಸ ಮುಂತಾದವರ ವಿಫುಲ ಸಾಹಿತ್ಯ ನಿರ್ಮಾಣವು ಈ ಕಾಲದಲ್ಲಿ ರಚಿತವಾಯಿತು, ದಾಸಸಾಹಿತ್ಯವೂ ಸಮೃದ್ಧವಾಯಿತು. ವಿಜಯನಗರದ ಪತನದ ತರುವಾಯ ಉಂಟಾದ ವಿಷಮ ವಾತಾವರಣದಲ್ಲಿ ಮತ್ತೆ ದಾಸಸಾಹಿತ್ಯದ ಪರಂಪರೆ ಕುಂಠಿತವಾಯಿತು. ಅನಂತರ ವಿಜಯದಾಸ ಮೊದಲಾದವರು ದಾಸಸಾಹಿತ್ಯವನ್ನು ಮುಂದುವರೆಸಿದರು.

ದಾಸವರೇಣ್ಯರನ್ನು ಕುರಿತು ವಿವರಣೆ

ಶ್ರೀಪಾದರಯರು:
ಲಕ್ಷ್ಮೀನಾರಯಣ ಮುನಿಯೆಂದು ಹೆಸರಾದ ಇವರು ಮದ್ವಾಚಾರ್ಯರ ಶಿಷ್ಯನಾದ ಫದ್ಮನಾಭತೀರ್ಥರ ಪೀಳಿಗೆಯ ಮುಳುಬಾಗಿಲು ಮಠಕ್ಕೆ ಒಂಬತ್ತನೆಯ ತಲೆಯವನಾದ ಸ್ವಾಮಿಯಾದರು. ಕನ್ನಡದಲ್ಲಿ ಧರ್ಮಗ್ರಂಥವನ್ನು ಪರಿವರ್ತಿಸಬೇಕೆಂಬ ಅಭಿಲಾಶೆ ಇವರಲ್ಲಿ ಉಂಟಾ ದುದು ಆ ಕಾಲಕೆ ಕ್ರಾಂತಿಕಾರಕವೇ ಆಗಿತ್ತು. ಇದಕ್ಕಾಗಿ ಭಾಗವತ ತಂಡವೊಂದನ್ನು ಏರ್ಪಡಿಸಿ ಪೂಜಾಕಾಲದಲ್ಲಿ ವೇದ ಪಾರಯಣ ಮಾಡಿದಂತೆ, ಭಾಗವತರ ಮುಖದಿಂದ ಕನ್ನಡ ದೇವರನಾಮಗಳನ್ನು ಹಾದಿಸಿದರು.ಅವುಗಳಲ್ಲಿ ಮುಖ್ಯವಾದವು ತಾವೇ ರಚಿಸಿದ ’ಭ್ರಮರ ಗೀತೆ’, ’ವೇಣುಗೀತೆ’,’ ಗೋಪಿಗೀತೆ’ ಗಳು. ಇವರ ಅಂಕಿತನಾಮ ರಂಗವಿಠ್ಠಲ. ಇವರ ಕೃತಿಗಳಲ್ಲಿ ಪದಲಾಲಿತ್ಯ, ಅಲಂಕಾರ ಪ್ರೌಢಿಮೆ, ಶೃಂಗಾರ, ಶಾಂತಿ, ಭಕ್ತಿರಸಗಳ ನಿರೂಪಣೆ ಇವು ಓದುಗರ ಚಿತ್ತವನ್ನೂ, ಹೃದಯವನ್ನೂ ಆಕರ್ಷಿಸುವುವು.

ವ್ಯಾಸರಾಯರು:
ಇವರು ಶ್ರೀಪಾದರಾಯರ ಶಿಷ್ಯೋತ್ತಮನಾಗಿ ಅಷ್ಟೇ ದೊಡ್ಡ ಪಂಡಿತನೆಂದು ಪ್ರಖ್ಯಾತಿ ಪಡೆದವರು. ವ್ಯಾಸರಾಯ ಮಠದ ಸ್ವಾಮಿಯಾದರು. ವಿಜಯನಗರದ ದೊರೆಗಳಿಂದ ಇವರು ವಿಷೇಶ ಮನ್ನಣೆ ಪಡೆದರು. ಕನ್ನಡದಲ್ಲಿ ದೇವರನಾಮಗಳನ್ನು ಬರೆದು, ಬರೆಯಿಸಿ ತನ್ನ ಗುರು ಶ್ರೀಪಾದರಾಯರ ಹೊಸ ಸಂಪ್ರದಾಯವನ್ನು ಶ್ರದ್ದೆಯಿಂದ ಮುಂದುವರೆಸಿದರು. ವ್ಯಾಸರಾಯರು ಬರೆದ ಕೀರ್ತನೆಗಳಲ್ಲಿ ಉಪಲಬ್ದವಾಗಿರುವುದು ನೂರಾರು ಮಾತ್ರ. ಇವುಗಳಲ್ಲಿ ಅವರ ಭಕ್ತಿನಿರ್ಭರತೆ, ಸಂಗೀತಜ್ನಾನ, ಜನತಾದೃಷ್ಟಿ ಗಳನ್ನು ಕಾಣಬಹುದು. ’ವೃತ್ತನಾಮ’ ಎಂಬ ಹೆಸರಿನ ಪ್ರಕಾರವು ಶ್ರೀಪಾದರಾಯರಿಂದ ಆರಂಭವಾಗಿ ವ್ಯಾಸರಾಯರ ಕಾಲದಲ್ಲಿ ಹೆಚ್ಚು ರೂಢವಾಯಿತು. ಈ ವೃತ್ತನಾಮದಲ್ಲಿ ವ್ಯಾಸರಯರು ಭಗವದ್ಗೀತೆಯನ್ನು ಬರೆದಿದ್ದಾರೆ.

ಆಧಾರ:
ಕನ್ನಡ ಸಾಹಿತ್ಯ ಚರಿತ್ರೆ – ರಂ. ಶ್ರೀ. ಮುಗುಳಿ
ಕನ್ನಡ ಸಾಹಿತ್ಯ ಚರಿತ್ರೆ – ತ. ಸು. ಶಾಮರಾಯ

Read Full Post »

ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬುದು ಅಕ್ಷರಶಃ ಅನುಭವದ ಮಾತು. ಮಗು ತನ್ನ ಮೊದಲ ದಿನಗಳನ್ನು ಕಳೆಯುವುದು ಮನೆಯಲ್ಲಿ, ತಾಯಿಯ ಆರೈಕೆಯಲ್ಲಿ. ಮನೆ ಮಗುವಿಗೆ ಸುರಕ್ಷತೆಯನ್ನು ಒದಗಿಸಿದರೆ, ತಾಯಿ ಮಗು ಮನೆಯಿಂರ್ದ ಹೊರಗೆ ಕಾಲಿಡುವ ಮೊದಲು, ಮಗುವಿನ ಆರೈಕೆ, ಮಗುವಿಗೆ ಮಾತು ಕಲಿಸುವುದು, ಒಳ್ಳೆಯ ನಡತೆಯನ್ನು ಕಲಿಸುವುದರಲ್ಲಿ ತೊಡಗುತ್ತಾಳೆ, ಈ ಕಾರಣದಿಂದ ಮಗುವಿಗೆ ಮನೆ ಮೊದಲ ಪಾಠಶಾಲೆಯಾದರೆ, ಪಾಠಶಾಲೆಯ ಗುರು ತಾಯಿ ಎಂಬುದರಲ್ಲಿ ಎರಡು ಮಾತಿಲ್ಲಾ.

ಹುಟ್ಟಿದ ಮಗು ಸ್ಪರ್ಶಜ್ನಾನದಿಂದ ಮಾತ್ರವೆ ತಾಯಿಯನ್ನು ಗುರುತಿಸಬಲ್ಲದು, ಹಸಿವಾದಾಗ ಅತ್ತರೆ ತಾಯಿ ಬಂದು ಹಾಲು ಕೊಡುತ್ತಾಳೆ ಎಂಬುದನ್ನು ಬಲ್ಲದು. ಎಳೆಯ ಮಗು ತಾಯಿಯ ಪೋಷಣೆಯಲ್ಲಿ ಬೆಳೆಯುತ್ತದೆ. ಇನ್ನೂ ಮಾತು ಕಲಿಯದಿದ್ದರೂ, ಮಗುವಿಗೆ ಪ್ರೀತಿಯ ಅರ್ಥವನ್ನು ತಾಯಿ ತನ್ನ ಆರೈಕೆಯಿಂದ ಮಗುವಿಗೆ ಅರ್ಥ ಮಾಡಿಸುತ್ತಾಳೆ. ಅಮ್ಮನ ತೋಳಿನಲ್ಲಿ, ಪ್ರೀತಿಯನ್ನು ಸವಿಯುತ್ತಾ, ಸಂತೋಷದಿಂದ ಬೆಳೆಯುವ ಮಗುವಿಗೆ, ಮನೆ ಒಂದು ಸುರಕ್ಷತೆಯ ಸ್ಥಳವಾಗಿ, ತಾಯಿ ಎಲ್ಲದಿರಿಂದ ರಕ್ಷಿಸುವ, ಪ್ರೀತಿಯ ದೇವತೆಯಾಗುತ್ತಾಳೆ.

ಮಗು ಸ್ವಲ್ಪ ಬೆಳೆದು, ಮಗುಚಿಕೊಂಡು ತೆವಳಲು ಆರಂಭಿಸಿದಾಗ, ತಾಯಿ ಮಗುವನ್ನು ಸುರಕ್ಷಿತವಾದ ಮಲಗಿಸಿ, ಅದು ಮಗುಚಿಕೊಂಡು ತೆವಳುವುದನ್ನು ನೋಡುತ್ತಾ, ಮಗು ಸುರಕ್ಷಿತವಾಗಿ ತೆವಳುವಂತೆ ನೋಡಿಕೊಳ್ಳುತ್ತಾಳೆ. ಮುಂದೆ ಮಗು ಅಂಬೆಗಾಲಿಡಲು ಆರಂಭಿಸಿದಾಗ, ಮತ್ತೆ ಸುರಕ್ಷಿತವಾಗಿ ಮಗು ಅಂಬೆಗಾಲಿಟ್ಟು ಒಡಾಡುವಂತೆ ನೋಡಿಕೊಳ್ಳುತ್ತಾಳೆ. ನಂತರ ತಾಯಿ ಮಗುವಿನ ಕೈಗಳನ್ನು ಹಿಡಿದು, ಅದರ ಕಾಲ ಮೇಲೆ ನಡೆಯುವುದನ್ನು ತೋರಿಸಿ, ಮತ್ತೆ ಮತ್ತೆ ನಡೆಸಿ ಮಗುವಿಗೆ ತಾನು ನಡಯಬಲ್ಲೆ ಎಂಬ ನಂಬಿಕೆ ಬೆಳಸುತ್ತಾಳೆ. ಒಂದು ದಿನ ಮಗು ತನಗೆ ತಾನೆ ನಡೆಯಲಾರಂಭಿಸುತ್ತದೆ. ಹಾಗೆ ನಡೆಯುವಾಗ ಬೀಳುವುದು ಸಹಜ. ಬಿದ್ದಾಗ ತಾಯಿ, ಮಗುವಿಗೆ ಆರೈಕೆ ಮಾಡಿ ಹುರಿದುಂಬಿಸಿ ಮತ್ತೆ ನಡೆಯುವ ಪ್ರಯತ್ನ ಮುಂದುವರೆಸುತ್ತಾಳೆ, ಮಗು ಸರಿಯಾಗಿ ನಡೆಯುವವರೆಗೂ ಮಗುವಿನ ಹಿಂದೆ ತಾಯಿ ಯಾವಗಲೂ ಇರುತ್ತಾಳೆ.

ಮಗು ಕೆಲದಿನಗಳಲ್ಲಿ ತನ್ನ ತೊದಲು ಮಾತನ್ನು ಆಡಲಾರಂಭಿಸುತ್ತದೆ. ತಾಯಿ ತೊದಲು ಮಾತಿನಲ್ಲಿ ಮಗುವಿನೊಡನೆ ಮಾತನಾಡುತ್ತ ಒಂದು ರೀತಿಯ ಸಂಬಂಧವನ್ನು ಬೆಸೆಯುತ್ತಾಳೆ. ಮಗುವಿನ ಭಾಷೆ ತಾಯಿಗೆ ಮಾತ್ರ ಅರ್ಥವಾಗುತ್ತದೆ. ಹೀಗೆ ಶುರುವಾದ ತೊದಲು ಮಾತನ್ನು, ತಿದ್ದಿ ಮಗುವಿಗೆ ಅಕ್ಷರ ಹಾಗು ಪದಗಳ ಅರ್ಥವನ್ನು ತಿಳಿಸುತ್ತಾ, ತೋರಿಸುತ್ತಾ ಕಲಿಸುತ್ತಾಳೆ. ಮಗು ಅಕ್ಷರವನ್ನಾಗಲಿ, ಪದಗಳನ್ನಾಗಲಿ ತಪ್ಪಾಗಿ ಉಚ್ಚರಿಸಿದಾಗ, ಅದನ್ನು ಸರಿಪಡಿಸಿ ಸರಿಯಾಗಿ ಉಚ್ಚರಿಸುವುದನ್ನು ತೋರಿಸಿಕೊಡುತ್ತಾಳೆ. ಮಗು ತನ್ನ ತಾಯಿಭಾಷೆಯನ್ನು ಸಹಜವಾಗಿ ನೋಡು ನೋಡುತ್ತಿದ್ದಂತೆ ಕಲಿತುಬಿಡುತ್ತದೆ.

ಮಗುವಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸುವುದು ತಾಯಿ. ಮಣ್ಣು ತಿನ್ನಬಾರದು, ಇತರ ಮಕ್ಕಳಿಗೆ ನೋವನ್ನು ಉಂಟು ಮಾಡಬಾರದು, ಕೈ ಕಾಲುಗಳನ್ನು ತೊಳೆದು ಶುದ್ದವಾಗಿಟ್ಟುಕೊಳ್ಳುವುದು, ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ಸ್ನಾನ ಮಾಡುವುದು, ಸರಿಯಾದ ಹೊತ್ತಿಗೆ ಊಟ ಮಾಡುವುದು, ಹಿರಿಯರಿಗೆ ಗೌರವ ತೋರಿಸುವುದು ಮುಂತಾದುವುಗಳನ್ನು ತಾಯಿ ಮನೆಯಲ್ಲಿಯೇ ಕಲಿಸುತ್ತಾಳೇ.

ಹೀಗೆ ಮಗು ಹುಟ್ಟಿದಂದಿನಿಂದ, ಶಾಲೆಗೆ ಹೋಗುವವರೆಗೂ, ಮನೆಯಲ್ಲಿಯೆ ತನ್ನ ಜೀವನಕ್ಕೆ ಅವಶ್ಯಕವಾದವುಗಳನ್ನು ತನ್ನ ತಾಯಿಯ ಮೂಲಕ ಕಲಿಯುತ್ತದೆ. ಮಗುವಿನ ನಡತೆ ಮನೆಯಲ್ಲಿಯೇ ರೂಪುಗೊಂಡಿರುತ್ತದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬಗಾದೆ, ಮನೆಯೇ ಪಾಠಶಾಲೆ, ತಾಯಿಯೇ ಮೊದಲಗುರು ಎಂಬುದನ್ನು ಸಮರ್ಥಿಸುತ್ತದೆ.

Read Full Post »