ಕಣ್ಣ ಮುಚ್ಚೆ ಕಾಡಿಗೋಡೆ
ಉದ್ದಿನ ಮೂಟೆ ಉರುಳೆ ಹೋಯಿತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ
ಈ ಆಟದಲ್ಲಿ, ಅಜ್ಜಿ (ಎಂದರೆ ದೊಡ್ಡವರು) ಒಂದು ಕಡೆ ಕುಳಿತಿರುತ್ತಾರೆ, ಮಕ್ಕಳೆಲ್ಲಾ ಸಾಲಾಗಿ ಅಜ್ಜಿ ಎದುರು ನಿಂತು ಕೊಳ್ಳಬೇಕು. ಅಜ್ಜಿ ತನ್ನ ಒಂದು ಕೈಯಿಂದ ಮಗುವಿನ ಕಣ್ಣು ಮುಚ್ಚಿ, ಮಾತೊಂದು ಕೈಯಲ್ಲಿ ಮಗುವಿನ ಮಗುವಿನ ತೋರು ಬೆರಳನ್ನು ಹಿಡಿದು, “ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು” ಎಂದು ಕೇಳುತ್ತಾರೆ. ಆಗ ಕಣ್ಣು ಮುಚ್ಚಿಸಿಕೊಂಡಿರುವ ಮಗು, ಅಜ್ಜಿ ತೋರಿಸಿದ ಮಗುವಿನ ಹೆಸರನ್ನು ಹೇಳಬೇಕು, ಸರಿಯಾಗಿ ಹೇಳಿದರೆ, ಅ ಮಗು ಅಜ್ಜಿಯ ಮಡಿಲಿಗೆ ಬಂದು ಕಣ್ಣು ಮುಚ್ಚಿಸಿಕೊಳ್ಳಬೇಕು. ಅಜ್ಜಿ ತೋರಿಸಿದ ಮಗುವಿನ ಹೆಸರನ್ನು ಸರಿಯಾಗಿ ಹೇಳದಿದ್ದರೆ, ಅಜ್ಜಿ ಆ ಮಗುವಿಗೆ “ಹಕ್ಕಿ ಕಾಡಿಗೆ ಹೋಗಿ ಅವಿತುಕೋ” ಎಂದು ಹೇಳುತ್ತಾರೆ. ಆ ಮಗು ಯಾರ ಕಣ್ಣಿಗೂ ಕಾಣದ ಕಡೆ ಅವಿತುಕೊಳ್ಳ ಬೇಕು. ಹೀಗೆ ಎಲ್ಲರ ಸರದಿ ಮುಗಿದ ನಂತರ, ಅಜ್ಜಿ ಕಣ್ಣು ಮುಚ್ಚಿದ ಮಗುವಿನ ಕಣ್ಣು ತೆರೆದು, ಹಕ್ಕಿಗಳನ್ನು ಕಂಡು ಹಿಡಿ ಎಂದು ಹೇಳುತ್ತಾರೆ. ಮಗು ಯಾರನ್ನಾದರೂ ಒಬ್ಬರನ್ನು ಕಂಡು ಹಿಡಿದರೆ, ಹಿಡಿದವ ಕಳ್ಳ/ಕಳ್ಳಿ ಯಾಗಿ ಕಣ್ಣು ಮುಚ್ಚಿಸಿಕೊಳ್ಳಬೇಕಾಗುತ್ತದೆ. ಮಗು ಕಂಡು ಹಿಡಿಯುವ ಮುನ್ನವೇ ಎಲ್ಲರೂ ಅಜ್ಜಿಯನ್ನು ಮುಟ್ಟಿದರೆ, ಆಗ ಮಗು ಮತ್ತೆ ಕಣ್ಣೂ ಮುಚ್ಚಿಸಿಕೊಳ್ಳಬೇಕಾಗುತ್ತದೆ.
ಈ ಆಟವನ್ನು ನೀವು ಬೇರೆ ರೀತಿ ಆಡುತಿದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.