Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2010

ಪುಟ್ಟಿ ಮಾಡಿದ ಸಣ್ಣ ತಪ್ಪಿಗೆ, ಅವರಮ್ಮ ಕೋಪಾ ಮಾಡಿಕೊಂಡು, ಪುಟ್ಟಿಗೆ ” ನಿನ್ನ ರೂಮಿನಲ್ಲಿರುವ ಕುರ್ಚಿಯಲ್ಲಿ ನಾನು ಹೇಳುವವರೆಗೂ ಕೂತಿರಬೇಕು, ಗೊತ್ತಾಯ್ತಾ” ಎಂದು ಅಪ್ಪಣೆ ಹೊರಡಿಸಿದರು, ಪುಟ್ಟಿ, ಮುಖ ಉಮ್ ಮಾಡಿ “ಗೊತ್ತಾಯ್ತು” ಎಂದು ರೂಮಿನೆಡೆಗೆ ನಡೆದಳು.

ಸ್ವಲ್ಪ ಹೊತ್ತು ಕಳೆದ ನಂತರ, ಪುಟ್ಟಿಯ ರೂಮಿಂದ “ಅಮ್ಮಾ ಈಗ ಹೊರಗೆ ಬರ್ಲಾ?” ಪುಟ್ಟಿಯ ದ್ವನಿ ಹೊರಗೆ ಬಂತು.

ಇನ್ನು ಕೋಪದಲ್ಲಿದ್ದ ಅಮ್ಮ, “ಇನ್ನು ಬೇಡ, ಅಲ್ಲೇ ಇರು” ಎಂದು ಉತ್ತರಿಸಿದರು.

ಅದಕ್ಕೆ ಪುಟ್ಟಿ ಜವಾಬು, “ಸರಿ ಅಮ್ಮ, ನಾನು ಯಾಕೆ ಕೇಳ್ದೆ ಅಂದ್ರೆ, ನಿನ್ನ ಜಂಬದ ಟೋಪಿ ನನ್ನ ಕುರ್ಚಿ ಮೇಲಿತ್ತು, ಅದರ ಮೇಲೆ ನಾನು ಕೂತಿದ್ದೀನಿ ಅದಕ್ಕೆ ಕೇಳ್ದೆ” !!

ನೀತಿ: ಮಕ್ಕಳಿಗೆ ಶಿಕ್ಷೆ ನೀಡುವ ಮುನ್ನ ಸ್ವಲ್ಪ ಯೋಚಿಸಿ!

ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

Read Full Post »

ಮೂಡಲು ಕುಣಿಗಲ ಕೆರೆ ನೋಡೊಕ್ವೊಂದ್ವೈಭೊಗ
ಮೂಡಿಬರ್ತಾನೆ ಚಂದ್ರಾಮ
ನಿಂಬೇಯ ಹಣ್ಣಿನಂತೆ ತುಂಬಿದ್ಕುಣಿಗಲು ಕೆರೆ
ಅಂದ ನೋಡಲು ಶಿವ ಬಂದು ಶಿವಮಗ್ಗಿ
ಕಬ್ಬಕ್ಕಿ ಬಾಯ ಬಿಡುತಾವೆ
ಹಾಕೋದೊಂದಾರುಗೋಲು ನೂಕೋಕೊಂದೂರುಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು ಕೆರೆಯಾಗೆ
ಗುಬ್ಬಿಸಾರಂಗ ನಗುತಾವೆ

Read Full Post »

ಹಾಲುಂಡ ತವರಿಗೆ ಏನೆಂದು ಹಾಡಲೆ
ಹೊಳೆ ದಂಡಿಲಿರುವ ಕರಕೀಯ ಕುಡಿಹಂಗೆ
ಹಬ್ಬಲೇ ಅವರ ರಸಬಳ್ಳಿ

ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಯ್ತು
ನಾ ಹುಟ್ಟಿ ಮನೆಗೆ ಎರವಾದೆ ಅಣ್ಣಯ್ಯ
ನೀ ಹುಟ್ಟಿ ಮನೆಗೆ ಹೆಸರಾದೆ

ತಂದೆಯ ನೆನೆದರೆ ತಂಗಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ವನ ನೆನೆದರೆ
ಮಾಸೀದ ತಲೆಯು ಮಡಿಯಾಯ್ತು

ಕಾಶೀಗೆ ಹೋಗಲಕ ಏಸೊಂದು ದಿನ ಬೇಕ
ತಾಸುಹೊತ್ತಿನ ಹಾದಿ ತವರೂರು ಮನೆಯಾಗೆ
ಕುಂತಾಳೆ ಕಾಶಿ ಹಡೆದವ್ವ

ಬಂಗಾರ ಬೆಳೆಯುವರು ತಿಂಗಳ ಹಾದಿಯವರು
ನನ್ನ ಕೊಟ್ಟು ಯಾಕ ಮರತಾರ ಮಾವಿನಹಣ್ಣು
ಉಣುವಾಗ ನನ್ನ ನೆನಸಾರ

ಹೆಣ್ಣೀನ ಜನುಮಾಕ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗ ಸಾವೀರ
ಹೊನ್ನ ಕಟ್ಟುವರು ಉಡಿಯೊಳಗ

ಸರದಾರ ಬರುವಾಗ ಸುರಿದಾವ ಮಲ್ಲೀಗಿ
ದೊರೆ ನನ್ನ ತಮ್ಮ ಬರುವಾಗ ಯಾಲಕ್ಕಿ
ಗೊನೆಬಾಗಿ ಹಾಲು ಸುರಿದಾವ

ತಂಗೀನ ಕಳುವ್ಯಾನ ತವರೇರಿ ನಿಂತಾನ
ಅಂಗೀಲಿ ನೀರು ಒರಸ್ಯಾನ ನನ್ನಣ್ಣ
ಇಂದೀಗೆ ತಂಗಿ ಎರವೆಂದ

ಮಗಳೆ ನಿನ್ನ ಕಳುವಿ ಮಾಳೀಗೆ ಏರೇನ
ಮಾವೀನ ಗೊಲ್ಲಿ ಮರೆಯಾಗಿ ಕಂದವ್ವ
ಮಾಣೀಕ ನಮಗೆ ಎರವಾಗಿ

Read Full Post »

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ರಾಟಲಿಲ್ಲೋ ಜಾಣಾ!
ರಾಟಲಿಲ್ಲೋ ಜಾಣಾ!

ಕತೆಗಾರ
ಮುನಿಯಾನ ಬಂಡೀ ಮುರಸಿ
ಮುನಿಯಾನ ಬಂಡೀ ಮುರಸಿ
ರಾಟೀ ಮಾಡಿಸಿ ಕೊಟ್ಟಾ
ರಾಟೀ ಮಾಡಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಕದರಿಲ್ಲೋ ಜಾಣಾ!
ಕದರಿಲ್ಲೋ ಜಾಣಾ!

ಕತೆಗಾರ
ಕೈಯಾನ ಗುದ್ದಲಿ ಮುರಿಸಿ
ಕೈಯಾನ ಗುದ್ದಲಿ ಮುರಿಸಿ
ಕದರ ಮಾಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಚಿಲ್ಲಿಲ್ಲೊ ಜಾಣ!
ಚಿಲ್ಲಿಲ್ಲೊ ಜಾಣ!

ಕತೆಗಾರ
ಮುನಿಯಾನ ಕೋಣವು ಕಡಿಸಿ
ಮುನಿಯಾನ ಕೋಣವು ಕಡಿಸಿ
ಚಿಲ್ಲು ಮಾಡಿಸಿ ಕೊಟ್ಟಾ
ಚಿಲ್ಲು ಮಾಡಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಹಮ್ಮಿಗಿಲ್ಲಲೊ ಜಾಣಾ!
ಹಮ್ಮಿಗಿಲ್ಲಲೊ ಜಾಣಾ!

ಕತೆಗಾರ
ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು
ಹಮ್ಮಿಗಿ ಮಾಡಿಸಿ ಕೊಟ್ಟಾ
ಹಮ್ಮಿಗಿ ಮಾಡಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಕಟ್ಟಿ ಇಲ್ಲಲೊ ಜಾಣಾ!
ಕಟ್ಟಿ ಇಲ್ಲಲೊ ಜಾಣಾ!

ಕತೆಗಾರ
ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ
ಕಟ್ಟಿ ಕಟ್ಟಿಸಿ ಕೊಟ್ಟಾ
ಕಟ್ಟಿ ಕಟ್ಟಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಗೆಳತ್ಯಾರಿಲ್ಲೊ ಜಾಣಾ!
ಗೆಳತ್ಯಾರಿಲ್ಲೊ ಜಾಣಾ!

ಕತೆಗಾರ
ಓಣ್ಯಾಗಿನವರ ಕರಸಿ
ಓಣ್ಯಾಗಿನವರ ಕರಸಿ
ಗೆಳತ್ಯಾರ ಕೊಡಿಸಿ ಕೊಟ್ಟಾ
ಗೆಳತ್ಯಾರ ಕೊಡಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ಗುಗ್ಗರಿಲ್ಲೊ ಜಾಣಾ!
ಗುಗ್ಗರಿಲ್ಲೊ ಜಾಣಾ!

ಕತೆಗಾರ
ಗೋದಿ ಕಡ್ಲಿ ತರಿಸಿ
ಗೋದಿ ಕಡ್ಲಿ ತರಿಸಿ
ಗುಗ್ಗರಿ ಹಾಕಿಸಿ ಕೊಟ್ಟಾ
ಗುಗ್ಗರಿ ಹಾಕಿಸಿ ಕೊಟ್ಟಾ

ಗಂಡ
ನೂಲೊಲ್ಲ್ಯಾಕಾ ಚೆನ್ನಿ!
ನೂಲೊಲ್ಲ್ಯಾಕಾ ಚೆನ್ನಿ!

ಹೆಂಡತಿ
ನನಗೆ ಬರೋದಿಲ್ಲೋ ಜಾಣಾ!
ನನಗೆ ಬರೋದಿಲ್ಲೋ ಜಾಣಾ!

Read Full Post »

ಜೋಗುಳದ ಪದಗಳು

ಹಾವಿನ ಹೆಡೆ ಚಂದ ಮಾವಿನ ಮಿಡಿ ಚೆಂದ
ಹಾರಡಿ ಬರುವ ಗಿಣಿ ಚಂದ ಕಂದಯ್ಯ
ನೀ ಚಂದ ನಮ್ಮ ಮನೆಗೆಲ್ಲ

ತೊಟ್ಟೀಲದಾಗೊಂದು ತೊಳೆದ ಮುತ್ತನು ಕಂಡೆ
ಹೊಟ್ಟೆ ಮೇಲಾಗಿ ಮಲಗ್ಯಾನ ಕಂದಯ್ಯಗೆ
ಮುತ್ತೀನ ದೃಷ್ಟಿ ತೆಗೆದೇನ

ಅಂಗೀಯ ತೊಟ್ಟರೆ ರಂಗನಾ ಸರಿಯೆಂಬೆ
ಚುಂಗುಬಿಟ್ಟರೆ ನವಿಲೆಂಬೆ ಕೃಷ್ಣಯ್ಯ
ಶೃಂಗಾರವಾಗೆ ದೊರೆಯೆಂಬೆ

ಹಾಲ್ಬೇಡಿ ಹರಿದತ್ತ ನೀರ್ಬೇಡಿ ನಿಂತತ್ತ
ಮೊಸರ್ಬೇಡಿ ಕೆಸರು ತುಳಿದತ್ತ ಕೃಷ್ಣೈಯ
ಹಸುರಂಗಿ ಬೇಡಿ ಹಸಿದನು

ಹಸುಮಗು ಚಿನ್ನವೆ ಮಿಸುನಿ ಹೊಂಬಣ್ಣವೆ
ಬಸುರಿಯರ ಹಣೆಯ ತಿಲಕವೆ ನನ್ನಯ್ಯ
ಹೊಸ ಮುತ್ತು ಹೊನ್ನ ಕಲಶವೆ

ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ
ಮಾಣಿಕ್ಯದಂಥ ಮಗ ಮುಂದೆ ಮಲಗಿರಲು
ಮಾರಾಯ್ರ ಗೊಡವಿ ನನಗೇನ

ಮಕ್ಕಳ ತಾಯವ್ವ ಕೆಟ್ಟೆನೆನ್ನಲು ಬೇಡ
ಪಕ್ಷಿ ಜಾತ್ಯಾಗೆ ಗರುಡನು ತನ್ನವ್ವನ
ಹುಟ್ಟಿದ ಸೆರೆಯ ಬಿಡಿಸ್ಯಾನು

ಜನಕ ರಾಯನ ಮಗಳು ವನಕೆ ತೊಟ್ಟಿಲ ಕಟ್ಟಿ
ಕುಶಲವರನಿಟ್ಟು ತೂಗ್ಯಾಳು ಸೀತಾದೇವಿ
ನಗುತ ವನವಾಸ ಕಳೆದಾಳು

ಬಡತನ ನನಗಿರಲಿ ಬಹಳ ಮಕ್ಕಳಿರಲಿ
ಮೇಲೆ ಗುರುವಿನ ದಯೆಯಿರಲಿ ನನ ಗುರುವೆ
ಬಡತನದ ಚಿಂತೆ ನಿನಗಿರಲಿ

Read Full Post »

ಸರ್ವಜ್ಞನ ವಚನಗಳು

ಸರ್ವಜ್ಞನ ವಚನಗಳು

ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ

ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ

ಮಜ್ಜಿಗೂಟಕೆ ಲೇಸು ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು – ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಎಳೆವಾಗ
ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯದಲಿ ಸುತ್ತಿ ಬಂದಂತೆ ಸರ್ವಜ್ಞ

ಮೂರ್ಖನಿಗೆ ಬುದ್ಧಿಯನು ನೂರ್ಕಾಲ ಹೇಳಿದರೆ
ಗೋರ್ಕಲ್ಲ ಮೇಲೆ ಮಳೆ ಹೊಯ್ದರೆ
ಕಲ್ಲು ನೀರ್ಕುಡಿಯುವದೆ ಸರ್ವಜ್ಞ

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ
ಎಲ್ಲರಿಗೆ ಇಲ್ಲ ಸರ್ವಜ್ಞ

ಕೃಪೆ : ವಿಚಾರ ಮಂಟಪ

Read Full Post »

Older Posts »