Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2009

ಒಂದು ಊರಿನಲ್ಲಿ ಅಣ್ಣ, ತಮ್ಮ ವಾಸವಾಗಿದ್ದರು. ಅಣ್ಣ ಶ್ರೀಮಂತ, ಆಳು ಕಾಳಿನೊಂದಿಗೆ ದೊಡ್ಡ ಮನೆಯಲ್ಲಿ ವಾಸಿಸುತಿದ್ದನು. ತಮ್ಮ ಬಡವ ತನ್ನ ಸಣ್ಣ ಗುಡಿಸಲಿನಲ್ಲಿ ವಾಸಿಸುತಿದ್ದನು.

ಒಮ್ಮೆ ತಮ್ಮ ಕಾಡಿಗೆ ಸೌದೆ ತರಲು ಹೊರಟನು. ಕಾಡಿನ ಹಾದಿಯಲ್ಲಿ, ಒಂದು ಗುಬ್ಬಚ್ಚಿ ಕುಂಟುತ್ತಿರುವುದನ್ನು ಕಂಡ ತಮ್ಮ ಆ ಗುಬ್ಬಚ್ಚಿಯನ್ನು ಎತ್ತಿಕೊಂಡು ಪರೀಕ್ಷಿಸಿದಾಗ, ಕಾಲಿಗೆ ಗಾಯವಾಗಿದ್ದು ಕಂಡು ಬಂತು. ಗುಬ್ಬಚ್ಚಿಯನ್ನು ಅಲ್ಲಿ ಬಿಡಲು ಮನಸಾಗದೆ ಅದನ್ನು ತನ್ನ ಮನೆಗೆ ತಂದು, ಅದಕ್ಕೆ ಊಟ ಹಾಕಿ ಚೆನ್ನಾಗಿ ನೋಡಿಕೊಂಡನು. ಸ್ವಲ್ಪ ದಿನಗಳ ನಂತರ ಗುಬ್ಬಚ್ಚಿಯ ಗಾಯ ಮಾಗಿ ಅದು ತಮ್ಮನಿಗೆ ಧನ್ಯವಾದಗಳನ್ನು ಹೇಳಿ ಹಾರಿ ಹೋಯಿತು. ಸ್ವಲ್ಪ ಸಮಯದ ನಂತರ ಮತ್ತೆ ಹಾರಿ ಬಂದ ಗುಬ್ಬಚ್ಚಿ, ತಮ್ಮನಿಗೆ ಒಂದು ಹಣ್ಣಿನ ಬೀಜವನ್ನು ಕೊಟ್ಟು, ‘ಈ ಬೀಜವನ್ನು ನಿನ್ನ ಮನೆಯ ಅಂಗಳದಲ್ಲಿ ನೆಡು, ಅದು ದೊಡ್ಡ ಮರವಾಗಿ ಹಣ್ಣು ಬಿಡುತ್ತದೆ” ಎಂದು ಹೇಳಿ ಹಾರಿ ಹೊಗುತ್ತದೆ.

ತಮ್ಮ ಗುಬ್ಬಚ್ಚಿ ಹೇಳಿದಂತೆ ಹಣ್ಣಿನ ಬೀಜವನ್ನು ಮನೆಯ ಮುಂದೆ ನೆಟ್ಟನು. ದಿನ ಕಳೆದಂತೆ ಮರ ಬೆಳೆದು ದೊಡ್ಡದಾಗಿ ಹಣ್ಣು ಬಿಡಲಾರಂಭಿಸಿತು. ಒಂದು ಹಣ್ಣು ಇತರ ಹಣ್ಣಿಗಿಂತ ಹತ್ತು ಪಟ್ಟು ದಪ್ಪನಾಗಿ ಬೆಳೆಯಿತು. ಆಶ್ಚರ್ಯದಿಂದ ಈ ವಿಶಿಷ್ಟವಾದ ಹಣ್ಣನ್ನು ಕತ್ತರಿಸಿದನು, ಅವನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ, ಆ ಹಣ್ಣಿನಿಂದ ವಜ್ರ, ವೈಢೂರ್ಯ, ಮುತ್ತು, ಹವಳಗಳು ಸುರಿದು ಬಂದವು. ತಮ್ಮ ತನ್ನ ಭಾಗ್ಯವನ್ನು ಬದಲಾಯಿಸಿದ ಹಕ್ಕಿಯನ್ನು ಸ್ಮರಿಸಿ ಕೊಂಡನು.

ಎಂದೂ ತಮ್ಮನ ಮನೆಗೆ ಬಾರದ ಅಣ್ಣ ಇದ್ದಕ್ಕಿದ್ದಂತೆ ಶ್ರೀಮಂತನಾದ ತಮ್ಮನ ಮನೆಗೆ ಬಂದನು. ಅದು ಇದು ಮಾತಾಡುತ್ತಾ “ಅದು ಹೇಗೆ ನೀನು ಇದ್ದಕ್ಕಿದ್ದಂತೆ ಶ್ರೀಮಂತನಾದೆ” ಎಂದು ತಮ್ಮನನ್ನು ಕೇಳಲು, ತಮ್ಮ ನಡೆದ ವಿಷವನ್ನು ಚಾಚು ತಪ್ಪದೆ ಅಣ್ಣ ನಿಗೆ ತಿಳಿಸುತ್ತಾನೆ.

ತಾನು ಇನ್ನೂ ಶ್ರೀಮಂತನಾಗಬೇಕೆಂಬ ಆಸೆಯಿಂದ ಅಣ್ಣ, ತಮ್ಮ ಮಾಡಿದಂತೆ ತಾನೂ ಸೌದೆ ತರಲು ಕಾಡಿಗೆ ಹೊರಡುತ್ತಾನೆ. ಕಾಡಿನ ದಾರಿಯಲ್ಲಿ ಎಷ್ಟೇ ಪ್ರಯತ್ನಿಸಿದರೂ ಯಾವ ಕುಂಟುವ ಅಥವಾ ಗಾಯಗೊಂಡಿರುವ ಹಕ್ಕಿಯು ಕಾಣಿಸಲಿಲ್ಲ. ಆಗ ತಾನೇ ಕಲ್ಲು ಬೀಸಿ ಗುಬ್ಬಚ್ಚಿಯೊಂದನ್ನು ಗಾಯಗೊಳಿಸುತ್ತಾನೆ.ತಾನೇ ಗಾಯಗೊಳಿಸಿದ ಗುಬ್ಬಚ್ಚಿಯನ್ನು, ಮನೆಗೆ ತಂದು ಅದರ ಗಾಯ ಮಾಯುವವರೆಗೆ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಪೂರ್ಣ ಗುಣವಾದ ಗುಬ್ಬಚ್ಚಿ ಅಣ್ಣನಿಗೆ ಧನ್ಯವಾದಗಳನ್ನು ಹೇಳಿ ಹಾರಿ ಹೋಗುತ್ತದೆ. ಸ್ವಲ್ಪ ಸಮಯದ ನಂತರ ಗುಬ್ಬಚ್ಚಿ ಮತ್ತೆ ಬಂದು, ಅಣ್ಣನಿಗೆ ಒಂದು ಹಣ್ಣಿನ ಬೀಜವನ್ನು ಕೊಟ್ಟು, ‘ಈ ಬೀಜವನ್ನು ನಿನ್ನ ಮನೆಯ ಅಂಗಳದಲ್ಲಿ ನೆಡು, ಅದು ದೊಡ್ಡ ಮರವಾಗಿ ಹಣ್ಣು ಬಿಡುತ್ತದೆ” ಎಂದು ಹೇಳಿ ಹಾರಿ ಹೊಗುತ್ತದೆ.

ಖುಷಿಯಿಂದ ಅಣ್ಣ ಬೀಜವನ್ನು ನೆಟ್ಟು ಗಿಡವನ್ನು ಚೆನ್ನಾಗಿ ಬೆಳೆಸುತಾನೆ. ಗಿಡ ಮರವಾಗಿ ಹಣ್ಣು ಬಿಡಲಾರಂಬಿಸುತ್ತದೆ. ಅವುಗಳಲ್ಲಿ ಒಂದು ಹಣ್ಣು ಇತರ ಹಣ್ಣಿಗಿಂತ ಹತ್ತರಷ್ಟು ದಪ್ಪ ಬೆಳೆಯುತ್ತದೆ. ಆದರೆ ಅಣ್ಣ ಅತಿ ಆಸೆಯಿಂದ, ಹಣ್ಣು ಇನ್ನು ದಪ್ಪವಾಗಲು ಬಿಡುತ್ತಾನೆ. ಸುಮಾರು ನೂರರಷ್ಟು ದಪ್ಪವಾದ ಹಣ್ಣನ್ನು ಆಳುಗಳ ಸಹಾಯದಿಂದ ಒಡೆಸುತ್ತಾನೆ, ಆಗ ಹಣ್ಣಿನಿಂದ ಧಾರಾಕಾರವಾಗಿ ಮರುಳು ಸುರಿಯಲಾರಂಬಿಸಿ, ಅಣ್ಣನ ಮನೆ ಮುಳುಗುವಷ್ಟು ಮರಳು ಸುರಿದು, ಕೊನೆಗೆ ಅಣ್ಣ ತನ್ನ ಎಲ್ಲ ಆಸ್ತಿ ಕಳೆದುಕೊಂಡು ಬಡವನಾಗುತ್ತಾನೆ.

Read Full Post »