
ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.
ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.
ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.