Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2008

ಚಾಚಾ ನೆಹರೂ ಮಕ್ಕಳಿಗಾಗಿ ಬರೆದ ಪತ್ರವೊಂದರ ಬಗ್ಗೆ ರೂಪಶ್ರೀ ಯವರು ಬರೆದ ಲೇಖನವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.

ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, “ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು” ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಎಲ್ಲೋ ಓದಿದ್ದೆ, ಅದನ್ನು ನನ್ನ ಕಂಪ್ಯುಟರ್’ನಲ್ಲಿ ಉಳಿಸಿಕೊಂಡಿದ್ದೆ. ಇಲ್ಲಿದೆ ಆ ಪತ್ರ :

ಡಿಸೆಂಬರ್ 03, 1949

ಮುದ್ದು ಪುಟಾಣಿಗಳೇ,
ನನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು… ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು.ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ… ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ.ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ. ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮೊಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ್ಯ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ. ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು.ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.

ಪ್ರೀತಿಯಿಂದ,
ಜವಹರಲಾಲ್ ನೆಹರು

ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ.

Read Full Post »

ಬಾಲವನದ ಮಿತ್ರನಾದ ವಿಪಿನ , ಯುಕ್ರೇನಿನ ಜಾನಪದ ಕಥೆಯನ್ನಾದರಿಸಿ, ತನ್ನದೇ ಶೈಲಿಯಲ್ಲಿ ಹೇಳಿರುವ ಕಥೆಯನ್ನು ಓದಿ…

ಒಬ್ಬ ವರ್ತಕನ ಬಳಿ ಏಳುನೂರು ವರಹಗಳಿದ್ದವು. ಅವನು ತುರ್ತಾಗಿ ಯಾವುದೋ ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಯಿತು. ಆ ಏಳು ನೂರು ವರಹಗಳನ್ನು ಅವನು ಒಬ್ಬ ನಂಬಿಕಸ್ಥನ ಬಳಿ ಬಿಟ್ಟುಹೋದ. ಅವನು ಹಿಂದಿರುಗಿದಾಗ ಅವನ ಸ್ನೇಹಿತ ಅವನು ತನಗೆ ಹಣ ಕೊಡಲೇ ಇಲ್ಲ ಎಂದು ವಾದಿಸಿದ. ಅವರು ನ್ಯಾಯಕ್ಕಾಗಿ ನ್ಯಾಯಾಧೀಶರ ಬಳಿ ಹೋದರು. ನ್ಯಾಯಾಧೀಶರು ಇಬ್ಬರಿಗೂ ಮೂರು (3)ಪ್ರಶ್ನೆಗಳನ್ನು ಕೇಳಿದರು.
1. ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸೋದು ಯಾವುದು?
2. ಎಲ್ಲಕ್ಕಿಂತ ವೇಗವಾಗಿ ಓಡುವುದು ಯಾವುದು?
3. ಎಲ್ಲಕ್ಕಿಂತ ಸುಖ ನೀಡುವುದು ಯಾವುದು?

ಇಬ್ಬರೂ ಮನೆಗೆ ಹೋದರು. ವರ್ತಕ ಎಷ್ಟು ಯೋಚಿಸಿದರೂ ಇವುಗಳ ಸರಿಯಾದ ಉತ್ತರ ತಿಳಿಯಲಿಲ್ಲ. ಆಗ ಅವನ ಮಗಳು ಅವೆಲ್ಲದಕ್ಕೂ ಸಮಾಧಾನಕರ ಉತ್ತರವನ್ನು ಹೇಳಿಕೊಟ್ಟಳು.

ಮರುದಿನ ವರ್ತಕ ಹಾಗೂ ಅವನ ಸ್ನೇಹಿತ ನ್ಯಾಯಾಧೀಶರಲ್ಲಿಗೆ ಹೋದರು. ವರ್ತಕನ ಸ್ನೇಹಿತ ಹೆಚ್ಚು ಹೊಟ್ಟೆ ತುಂಬಿಸುವುದು ಹಂದಿ ಮಾಂಸ, ಹೆಚ್ಚು ವೇಗವಾಗಿ ಓಡೋದು ಬೇಟೆನಾಯಿಗಳು, ಹೆಚ್ಚು ಸುಖ ನೀಡುವುದು ಹಣ ಎಂದು ಹೇಳಿದನು. ಬದಲಾಗಿ ವರ್ತಕನು ಹೆಚ್ಚು ಹೊಟ್ಟೆ ತುಂಬಿಸೋದು ಭೂಮಿತಾಯಿ, ಹೆಚ್ಚು ವೇಗವಾಗಿ ಓಡೋದು ಮನಸ್ಸು, ಹೆಚ್ಚು ಸುಖ ಕೊಡುವುದು ನಿದ್ದೆ ಎಂದು ಹೇಳಿದನು.

ಇಬ್ಬರ ಉತ್ತರಗಳನ್ನು ಗಮನವಿಟ್ಟು ಕೇಳಿದ ನ್ಯಾಯಾಧೀಶರು ವರ್ತಕನೇ ಆ ಹಣದ ಒಡೆಯ ಎಂದು ನಿರ್ಧರಿಸಿದರು. ಏಕೆಂದರೆ ಇಬ್ಬರ ಉತ್ತರಗಳಿಂದ ಅವರಿಗೆ ಹಣಕ್ಕಾಗಿ ಸುಳ್ಳು ಹೇಳುವ ಸ್ವಭಾವ ಅವರಿಬ್ಬರಲ್ಲಿ ವರ್ತಕನ ಬದಲಾಗಿ ಅವನ ಸ್ನೇಹಿತನದೇ ಇರುವ ಸಾಧ್ಯತೆ ಹೆಚ್ಚು ಎಂದು ಅರ್ಥವಾಯಿತು.

Read Full Post »

ಭಾಷಣ ಮಾಡುವುದು ಒಂದು ಕಲೆ, ಅದು ಚಿಕ್ಕಂದಿನಿಂದಲೇ ಬೆಳೆದರೆ ಉತ್ತಮ. ಇನ್ನೊಬ್ಬರು ಹೇಳಿದ್ದನ್ನು ಬರೆದುಕೊಂಡು ಹೋಗಿ ವೇದಿಕೆಯ ಮೇಲೆ ಓದುವುದನ್ನ ಭಾಷಣವೆನ್ನಲಾಗದು. ವಿಷಯವನ್ನು ಮೊದಲು ಅರ್ಥ ಮಾಡಿಕೊಂಡು, ವೇದಿಕೆಯ ಮೇಲೆ ತನಗೆ ಅರ್ಥವಾದದ್ದನ್ನು ಇತರರಿಗೂ ಅರ್ಥವಾಗುವಂತೆ ಹೇಳುವುದು ಮುಖ್ಯ.

ಬಾಲವನದ ಪುಟ್ಟ ಸ್ನೇಹಿತನಾದ ವಿಪಿನ ನಾಲ್ಕು ವರುಷದವನಗಿದ್ದಾಗ ಮಕ್ಕಳ ದಿನಾಚರಣೆಯ ದಿನದಂದು ಮಾಡಿದ ಭಾಷಣವನ್ನ ಕೆಳಗೆ ಕೊಟ್ಟಿದ್ದೇನೆ.

ಮಕ್ಕಳ ದಿನ

ಇಂದು ನವೆಂಬರ್ ೧೪, ಮಕ್ಕಳ ದಿನ. ಮಕ್ಕಳನ್ನು ತುಂಬಾ ಪ್ರೀತಿಸುತಿದ್ದ, ನಮ್ಮ ದೇಶದ ಮೊದಲ ಪ್ರಧಾನಿ ಚಾ ಚಾ ನೆಹರು ಹುಟ್ಟಿದ ದಿನ.

ಅವರ ಪೂರ್ಣ ಹೆಸರು ಜವಾಹರಲಾಲ ನೆಹರು. ತಾಯಿ ಸ್ವರೂಪ ರಾಣಿ. ತಂದೆ ಮೋತಿಲಾಲ ನೆಹರು.

ಚಾ ಚಾ ನೆಹರು ಭಾರತದ ಏಳಿಗೆಗೆ, ವಿಜ್ಞಾನ ತಂತ್ರಜ್ಞಾನಗಳು ಅವಶ್ಯವೆಂದು ಸಾರಿ, ಭಾರತದ ಬೆಳವಣಿಗೆ ಯೋಜನಾಬಧ್ಧವಾಗಿ ಆಗುವಂತೆ ಶ್ರಮಿಸಿದರು. ಅಣೆಕಟ್ಟುಗಳಂಥಹ ಭವ್ಯ ನಿರ್ಮಾಣಗಳನ್ನು ಕುರಿತು ಇವು ನಮ್ಮ ದೇಶದ ನೂತನ ದೇವಾಲಯಗಳು ಹಾಗೂ ಇವೇ ನಮ್ಮ ರಾಷ್ಟ್ರೀಯ ಯಾತ್ರಾ ಸ್ಥಳಗಳು ಎಂದು ಹೇಳಿದ್ದರು.

ನಾವೆಲ್ಲ ವಿದ್ಯೆ ಕಲಿತು ದೊಡ್ಡವರಾದ ಮೇಲೆ, ಭಾರತದ ಏಳಿಗೆಗಾಗಿ ಕೆಲಸ ಮಾಡುತ್ತೇವೆಂದು ಪ್ರತಿಜ್ಞೆ ಮಾಡೋಣ. ಇದೇ “ಇಂದಿನ ಮಕ್ಕಳೇ ಮುಂದಿನ ಜನಾಂಗ” ಎಂದು ಹೇಳುತಿದ್ದ ಚಾ ಚಾ ನೆಹರೂಗೆ ನಮ್ಮೆಲ್ಲರ ಹುಟ್ಟು ಹಬ್ಬದ ಉಡುಗೊರೆ.

ಚಾ ಚಾ ನೆಹರೂಗೆ ಜೈ ಭಾರತಾಂಬೆಗೆ ಜೈ.

ನಾಲ್ಕು ವರುಷದ ವಿಪಿನ ಮಾಡಿದ ಭಾಷಣ ಬೇರೆ ಮಕ್ಕಳಲ್ಲಿ ಭಾಷಣದ ಕಲೆಯನ್ನು ಬೆಳೆಸುವಲ್ಲಿ ಸಹಾಯಕವಾದರೆ ನಮಗೆ ಸಂತೋಷ.

Read Full Post »