ಒಮ್ಮೆ ಮುಲ್ಲಾ ನಸ್ರುದ್ದೀನ ತನ್ನ ಕತ್ತೆಗೆ ಹುಲ್ಲು ಹಾಕಿ, ಅದು ತಿನ್ನುವವರೆಗೂ ಕಾಯುತ್ತಾ ನಿಂತಿದ್ದನು.
ದಾರಿಹೋಕನೊಬ್ಬ ಮುಲ್ಲಾನನ್ನು ನೋಡಿ, ಅವನನ್ನು ಕಿಚಾಯಿಸೊಣವೆಂದುಕೊಂಡು ಮುಲ್ಲಾನ ಬಳಿ ಬಂದು, “ಈ ಕತ್ತೆ ನಿಮ್ಮ ಬಳಿ ಎಷ್ಟು ವರುಷಗಳಿಂದ ಇದೆ?” ಎಂದು ಪ್ರಶ್ನಿಸಿದ.
ಅದಕ್ಕೆ ಮುಲ್ಲಾ, “ಈ ಕತ್ತೆ ಸುಮಾರು ವರ್ಷಗಳಿಂದ ನನ್ನ ಬಳಿ ಇದೆ, ನನ್ನ ಎಲ್ಲ ಪ್ರಯಾಣಗಳಲ್ಲೂ ಈ ಕತ್ತೆ ನನ್ನ ಸಂಗಾತಿಯಾಗಿ ಪ್ರಯಾಣಿಸಿದೆ” ಎಂದ.
“ಹಾಗೆಂದ ಮೇಲೆ, ಈ ಕತ್ತೆಯ ಪರಿಚಯ ನಿಮಗೆ ಚೆನ್ನಾಗಿದೆ ಎಂದಂತಾಯಿತು, ಹಾಗೆಯೆ ನಿಮಗೆ ಈ ಕತ್ತೆಯ ಭಾಷೆ ಕೂಡ ಅರ್ಥವಾಗಬಹುದಲ್ಲವೇ” ಎಂದು ದಾರಿಹೋಕ ಮುಲ್ಲಾನನ್ನು ಕಿಚಾಯಿಸಿದ.
ಮುಲ್ಲಾನಿಗೆ, ಈತ ನನ್ನ ಕಾಲೆಳೆಯುತ್ತಿದ್ದಾನಿ ಎಂಬುದು ಅರಿವಾಗಿ, ಅವನಿಗೆ ಬುದ್ದಿ ಕಲಿಸಲು ನಿರ್ಧರಿಸಿ. “ಹೌದು, ನನಗೆ ಕತ್ತೆಯ ಭಾಷೆ ಗೊತ್ತು, ಕತ್ತೆ ತನಗೆ ಖುಶಿಯಾದಾಗ, ತನ್ನ ಕಿವಿಯನ್ನು ಜೋರಾಗಿ ಅಲ್ಲಾಡಿಸುತ್ತದೆ.” ಎಂದ ಮುಲ್ಲಾ
“ಕತ್ತೆಗೆ ದುಃಖವಾದರೆ?”, ಪ್ರಶ್ನಿಸಿದ ದಾರಿಹೋಕ.
“ಕತ್ತೆಗೆ ದುಃಖವಾದರೆ, ಅದು ತನ್ನ ತಲೆಯನ್ನ ಅಲ್ಲಾಡಿಸುತ್ತದೆ, ಹಾಗೆಯೆ ಕತ್ತೆಗೆ ನೊಣಗಳು ಕಿರಿಕಿರಿಯುಂಟುಮಾಡಿದರೆ ಅದು ತನ್ನ ಬಾಲ ಅಲ್ಲಾಡಿಸುತ್ತದೆ” ಎಂದ ಮುಲ್ಲ.
ಆ ಹೊತ್ತಿಗೆ ಸರಿಯಾಗಿ ಕತ್ತೆ ಕಿರುಚಲಾರಂಬಿಸಿತು.
ತಕ್ಷಣ “ಕತ್ತೆ ಏನು ಹೇಳುತ್ತಿದೆ” ಎಂದ ದಾರಿಹೋಕ.
ಮುಲ್ಲಾ ಮೆಲ್ಲನೆ ದಾರಿಹೋಕನ ಕಿವಿಯಬಳಿ ಬಂದು ಗುಟ್ಟಾಗಿ, “ನಿನ್ನೊಡನೆ ಮಾತಾಡುತ್ತಿರುವ ಆ ಕತ್ತೆ ಯಾರು” ಎಂದು ಕೇಳಿತು ಎಂದ.
ದಾರಿಹೋಕ ಮುಖ ಕೆಂಪುಮಾಡಿಕೊಂಡು, ಅಲ್ಲಿಂದ ಜಾಗ ಖಾಲಿ ಮಾಡಿದ. ಮುಲ್ಲಾ ನಸ್ರುದ್ದೀನ್ ನಸುನಗುತ್ತ ದಾರಿಹೋಕ ಹೋಗುವದನ್ನೇ ನೋಡುತ್ತ ನಿಂತ.