Archive

Archive for the ‘ಜನಪದ ಕತೆ-ಗೀತೆಗಳು’ Category

ಅಣ್ಣ ತಮ್ಮ

July 23, 2009 balaglobal 2 comments

ಒಂದು ಊರಿನಲ್ಲಿ ಅಣ್ಣ, ತಮ್ಮ ವಾಸವಾಗಿದ್ದರು. ಅಣ್ಣ ಶ್ರೀಮಂತ, ಆಳು ಕಾಳಿನೊಂದಿಗೆ ದೊಡ್ಡ ಮನೆಯಲ್ಲಿ ವಾಸಿಸುತಿದ್ದನು. ತಮ್ಮ ಬಡವ ತನ್ನ ಸಣ್ಣ ಗುಡಿಸಲಿನಲ್ಲಿ ವಾಸಿಸುತಿದ್ದನು.

ಒಮ್ಮೆ ತಮ್ಮ ಕಾಡಿಗೆ ಸೌದೆ ತರಲು ಹೊರಟನು. ಕಾಡಿನ ಹಾದಿಯಲ್ಲಿ, ಒಂದು ಗುಬ್ಬಚ್ಚಿ ಕುಂಟುತ್ತಿರುವುದನ್ನು ಕಂಡ ತಮ್ಮ ಆ ಗುಬ್ಬಚ್ಚಿಯನ್ನು ಎತ್ತಿಕೊಂಡು ಪರೀಕ್ಷಿಸಿದಾಗ, ಕಾಲಿಗೆ ಗಾಯವಾಗಿದ್ದು ಕಂಡು ಬಂತು. ಗುಬ್ಬಚ್ಚಿಯನ್ನು ಅಲ್ಲಿ ಬಿಡಲು ಮನಸಾಗದೆ ಅದನ್ನು ತನ್ನ ಮನೆಗೆ ತಂದು, ಅದಕ್ಕೆ ಊಟ ಹಾಕಿ ಚೆನ್ನಾಗಿ ನೋಡಿಕೊಂಡನು. ಸ್ವಲ್ಪ ದಿನಗಳ ನಂತರ ಗುಬ್ಬಚ್ಚಿಯ ಗಾಯ ಮಾಗಿ ಅದು ತಮ್ಮನಿಗೆ ಧನ್ಯವಾದಗಳನ್ನು ಹೇಳಿ ಹಾರಿ ಹೋಯಿತು. ಸ್ವಲ್ಪ ಸಮಯದ ನಂತರ ಮತ್ತೆ ಹಾರಿ ಬಂದ ಗುಬ್ಬಚ್ಚಿ, ತಮ್ಮನಿಗೆ ಒಂದು ಹಣ್ಣಿನ ಬೀಜವನ್ನು ಕೊಟ್ಟು, ‘ಈ ಬೀಜವನ್ನು ನಿನ್ನ ಮನೆಯ ಅಂಗಳದಲ್ಲಿ ನೆಡು, ಅದು ದೊಡ್ಡ ಮರವಾಗಿ ಹಣ್ಣು ಬಿಡುತ್ತದೆ” ಎಂದು ಹೇಳಿ ಹಾರಿ ಹೊಗುತ್ತದೆ.

ತಮ್ಮ ಗುಬ್ಬಚ್ಚಿ ಹೇಳಿದಂತೆ ಹಣ್ಣಿನ ಬೀಜವನ್ನು ಮನೆಯ ಮುಂದೆ ನೆಟ್ಟನು. ದಿನ ಕಳೆದಂತೆ ಮರ ಬೆಳೆದು ದೊಡ್ಡದಾಗಿ ಹಣ್ಣು ಬಿಡಲಾರಂಭಿಸಿತು. ಒಂದು ಹಣ್ಣು ಇತರ ಹಣ್ಣಿಗಿಂತ ಹತ್ತು ಪಟ್ಟು ದಪ್ಪನಾಗಿ ಬೆಳೆಯಿತು. ಆಶ್ಚರ್ಯದಿಂದ ಈ ವಿಶಿಷ್ಟವಾದ ಹಣ್ಣನ್ನು ಕತ್ತರಿಸಿದನು, ಅವನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ, ಆ ಹಣ್ಣಿನಿಂದ ವಜ್ರ, ವೈಢೂರ್ಯ, ಮುತ್ತು, ಹವಳಗಳು ಸುರಿದು ಬಂದವು. ತಮ್ಮ ತನ್ನ ಭಾಗ್ಯವನ್ನು ಬದಲಾಯಿಸಿದ ಹಕ್ಕಿಯನ್ನು ಸ್ಮರಿಸಿ ಕೊಂಡನು.

ಎಂದೂ ತಮ್ಮನ ಮನೆಗೆ ಬಾರದ ಅಣ್ಣ ಇದ್ದಕ್ಕಿದ್ದಂತೆ ಶ್ರೀಮಂತನಾದ ತಮ್ಮನ ಮನೆಗೆ ಬಂದನು. ಅದು ಇದು ಮಾತಾಡುತ್ತಾ “ಅದು ಹೇಗೆ ನೀನು ಇದ್ದಕ್ಕಿದ್ದಂತೆ ಶ್ರೀಮಂತನಾದೆ” ಎಂದು ತಮ್ಮನನ್ನು ಕೇಳಲು, ತಮ್ಮ ನಡೆದ ವಿಷವನ್ನು ಚಾಚು ತಪ್ಪದೆ ಅಣ್ಣ ನಿಗೆ ತಿಳಿಸುತ್ತಾನೆ.

ತಾನು ಇನ್ನೂ ಶ್ರೀಮಂತನಾಗಬೇಕೆಂಬ ಆಸೆಯಿಂದ ಅಣ್ಣ, ತಮ್ಮ ಮಾಡಿದಂತೆ ತಾನೂ ಸೌದೆ ತರಲು ಕಾಡಿಗೆ ಹೊರಡುತ್ತಾನೆ. ಕಾಡಿನ ದಾರಿಯಲ್ಲಿ ಎಷ್ಟೇ ಪ್ರಯತ್ನಿಸಿದರೂ ಯಾವ ಕುಂಟುವ ಅಥವಾ ಗಾಯಗೊಂಡಿರುವ ಹಕ್ಕಿಯು ಕಾಣಿಸಲಿಲ್ಲ. ಆಗ ತಾನೇ ಕಲ್ಲು ಬೀಸಿ ಗುಬ್ಬಚ್ಚಿಯೊಂದನ್ನು ಗಾಯಗೊಳಿಸುತ್ತಾನೆ.ತಾನೇ ಗಾಯಗೊಳಿಸಿದ ಗುಬ್ಬಚ್ಚಿಯನ್ನು, ಮನೆಗೆ ತಂದು ಅದರ ಗಾಯ ಮಾಯುವವರೆಗೆ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಪೂರ್ಣ ಗುಣವಾದ ಗುಬ್ಬಚ್ಚಿ ಅಣ್ಣನಿಗೆ ಧನ್ಯವಾದಗಳನ್ನು ಹೇಳಿ ಹಾರಿ ಹೋಗುತ್ತದೆ. ಸ್ವಲ್ಪ ಸಮಯದ ನಂತರ ಗುಬ್ಬಚ್ಚಿ ಮತ್ತೆ ಬಂದು, ಅಣ್ಣನಿಗೆ ಒಂದು ಹಣ್ಣಿನ ಬೀಜವನ್ನು ಕೊಟ್ಟು, ‘ಈ ಬೀಜವನ್ನು ನಿನ್ನ ಮನೆಯ ಅಂಗಳದಲ್ಲಿ ನೆಡು, ಅದು ದೊಡ್ಡ ಮರವಾಗಿ ಹಣ್ಣು ಬಿಡುತ್ತದೆ” ಎಂದು ಹೇಳಿ ಹಾರಿ ಹೊಗುತ್ತದೆ.

ಖುಷಿಯಿಂದ ಅಣ್ಣ ಬೀಜವನ್ನು ನೆಟ್ಟು ಗಿಡವನ್ನು ಚೆನ್ನಾಗಿ ಬೆಳೆಸುತಾನೆ. ಗಿಡ ಮರವಾಗಿ ಹಣ್ಣು ಬಿಡಲಾರಂಬಿಸುತ್ತದೆ. ಅವುಗಳಲ್ಲಿ ಒಂದು ಹಣ್ಣು ಇತರ ಹಣ್ಣಿಗಿಂತ ಹತ್ತರಷ್ಟು ದಪ್ಪ ಬೆಳೆಯುತ್ತದೆ. ಆದರೆ ಅಣ್ಣ ಅತಿ ಆಸೆಯಿಂದ, ಹಣ್ಣು ಇನ್ನು ದಪ್ಪವಾಗಲು ಬಿಡುತ್ತಾನೆ. ಸುಮಾರು ನೂರರಷ್ಟು ದಪ್ಪವಾದ ಹಣ್ಣನ್ನು ಆಳುಗಳ ಸಹಾಯದಿಂದ ಒಡೆಸುತ್ತಾನೆ, ಆಗ ಹಣ್ಣಿನಿಂದ ಧಾರಾಕಾರವಾಗಿ ಮರುಳು ಸುರಿಯಲಾರಂಬಿಸಿ, ಅಣ್ಣನ ಮನೆ ಮುಳುಗುವಷ್ಟು ಮರಳು ಸುರಿದು, ಕೊನೆಗೆ ಅಣ್ಣ ತನ್ನ ಎಲ್ಲ ಆಸ್ತಿ ಕಳೆದುಕೊಂಡು ಬಡವನಾಗುತ್ತಾನೆ.

ಮಿಂಚಿನ ರಾಣಿ ಕತೆ

June 30, 2009 balaglobal 8 comments

ಒಂದು ಊರಿನಲ್ಲಿ ಒಬ್ಬ ರಾಜ ಇದ್ದ. ಆತನಿಗೆ ಒಬ್ಬನೇ ಮಗ. ರಾಜಕುಮಾರ ಮದುವೆಯ ವಯಸ್ಸಿಗೆ ಬಂದಾಗ, ರಾಜ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕಲಾರಂಭಿಸಿದ. ರಾಜಕುಮಾರ ಯಾವ ಹೆಣ್ಣನ್ನು ನೋಡಿದರು ಏನಾದರೊಂದು ಕೊಂಕು ತೆಗೆದು ಹೆಣ್ಣನ್ನು ತಿರಸ್ಕರಿಸುತಿದ್ದ. ಒಮ್ಮೆ ದೂರ ದೇಶದಿಂದ ಮಂತ್ರಿಯೊಬ್ಬ ರಾಜಕುಮಾರಿಯನ್ನು ತೋರಿಸಲು ಕರೆತಂದರೆ, ರಾಜಕುಮಾರ ಮತ್ತೆ ಕೊಂಕು ಮಾತಾಡಿ ಈ ರಾಜಕುಮಾರಿಯನ್ನು ತಿರಸ್ಕರಿಸುತ್ತಾನೆ. ರಾಜಕುಮಾರನ ನಡವಳಿಕೆಯನ್ನು ಕೇಳಿ ತಿಳಿದಿದ್ದ ಮಂತ್ರಿ, “ನೀನು ಮೆಚ್ಚ ಬಹುದಾದ ಹೆಣ್ಣೆಂದರೆ ಮಿಂಚಿನ ರಾಣಿ ಒಬ್ಬಳೇ, ನೀನು ಆಕೆಯನ್ನು ಯಾಕೆ ಮದುವೆಯಾಗಬಾರದು” ಎಂದು ಹೇಳುತ್ತಾನೆ. ರಾಜಕುಮಾರನ ಕಿವಿ ಚುರುಕಾಗಿ, “ಯಾರು ಈ ಮಿಂಚಿನ ರಾಣಿ?” ಎಂದು ಕೇಳುತ್ತಾನೆ. ಆಗ ಮಂತ್ರಿ ಹೇಳುತ್ತಾನೆ, “ಏಳು ಪರ್ವತಗಳನ್ನು ದಾಟಿ, ಕೊನೆಯ ಪರ್ವತದ ಮೇಲೆ ಸತತ ಮಿಂಚು ಗುಡುಗು ಸಹಿತವಾದ ಮಳೆ ಸದಾ ಸುರಿಯುತ್ತಿರುತ್ತದೆ. ಮಿಂಚಿನೊಳಗೆ ನಿನ್ನ ಕೈ ಹಾಕಿದರೆ, ನಿನಗೊಂದು ದಾರದ ಉಂಡೆ ಸಿಗುತ್ತದೆ. ಹೀಗೆ ಒಂದು ಸೀರೆಗೆ ಬೇಕಾಗುವಷ್ಟು ದಾರದ ಉಂಡೆಗಳನ್ನು ಸಂಗ್ರಹಿಸಿದ ಮೇಲೆ, ಒಂದು ಸೀರೆಯನ್ನು ನೇಯಬೇಕು. ಆಗ ಅ ಸೀರೆಯನ್ನು ಕೇಳಲು ಮಿಂಚಿನ ರಾಣಿ ಬರುತ್ತಾಳೆ. ನನ್ನನ್ನು ಮದುವೆಯಾದರೆ ಮಾತ್ರ ಈ ಸೀರೆ ಕೊಡುವೆ ಎಂದು ಹೇಳು. ಅವಳು ಒಪ್ಪಿ ನಿನ್ನನ್ನು ಮದುವೆಯಾಗುತ್ತಾಳೆ.”

ಅಂದೇ ರಾಜಕುಮಾರ ಬುತ್ತಿಯನ್ನು ಕಟ್ಟಿಕೊಂಡು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟುಬಿಟ್ಟ. ಹಲವಾರು ದಿನಗಳು ನಡೆದು ಆರು ಪರ್ವತಗಳನ್ನು ಹತ್ತಿ, ಇನ್ನೇನು ಏಳನೇ ಪರ್ವತವನ್ನು ಹತ್ತಲು ಸಜ್ಜಾಗುತಿದ್ದಾಗ ಅಲೊಂದು ಗುಹೆಯಿಂದ ‘ನೀರು ನೀರು’ ಎಂದು ಯಾರೋ ಕರೆಯುತ್ತಿರುವುದು ಕೇಳಿಸಿತು. ಯಾರೋ ಋಷಿಯಿರಬೇಕು ಎಂದು ರಾಜಕುಮಾರ ಗುಹೆಯ ಒಳಗೆ ಹೋಗುತ್ತಾನೆ. ಅಲ್ಲಿ ಒಂದು ದೊಡ್ಡ ಬಂಡೆ, ಮೇಲೊಂದು ಬಿಂದಿಗೆ ಅಷ್ಟೇ ಮತ್ತೇನು ಕಾಣಿಸಲಿಲ್ಲ. ಬಂಡೆಯಿಂದ ‘ನೀರು ನೀರು’ ಎಂಬ ಶಬ್ದ ಬರುತಿತ್ತು. ಯಾರೋ ಮರೆಯಲ್ಲಿ ಅವಿತಿರಬೇಕು, ಅವರಿಗೆ ನೀರು ಬೇಕೇನೋ ಎಂದುಕೊಂಡು ರಾಜಕುಮಾರ ಬಿಂದಿಗೆಯನ್ನು ಹೊತ್ತು ಬಳಿಯಲ್ಲಿದ್ದ ಹೊಂಡದಿಂದ ನೀರನ್ನು ಹೊತ್ತು ತಂದು ಬಂಡೆಯ ಮೇಲೆ ಇರಿಸಿ, ಹೊರಡಲನುವಾದ. ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆಲ್ಲಾ ಚೆಲ್ಲಿ ಹೋಯಿತು. ರಾಜಕುಮಾರ ಮತ್ತೆ ಬಿಂದಿಗೆಯನ್ನು ಹೊತ್ತು ಹೊಂಡದಿಂದ ನೀರನ್ನು ಮೊಗೆದು ತಂದು ಮತ್ತೆ ಬಂಡೆಯ ಮೇಲೆ ಇರಿಸಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ, ಮತ್ತೆ ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆಲ್ಲಾ ಚೆಲ್ಲಿ ಹೋಯಿತು. ಹೀಗೆ ರಾಜಕುಮಾರ ನೂರ ಒಂದು ಬಾರಿ ಮಾಡಿ, ಕೊನೆಯಬಾರಿ ಬಿಂದಿಗೆ ಉರುಳಿದಾಗ, ಅ ಬಂಡೆಗಲ್ಲು ಇದ್ದಲ್ಲಿ ಋಷಿಯೊಬ್ಬ ಎದ್ದು ಬಂದು, ರಾಜಕುಮಾರನನ್ನು ಅಪ್ಪಿಕೊಳ್ಳುತ್ತಾನೆ. ಶಾಪಕ್ಕೆ ಗುರಿಯಾಗಿ ಬಂಡೆಯಾಗಿದ್ದ ಋಷಿ, ನೂರೊಂದು ಬಾರಿ ನೀರಿನ ಸ್ನಾನದಿಂದ ತನ್ನ ಶಾಪ ವಿಮೊಚನೆಯಾಯಿತು ಎಂದು ಹೇಳಿ, “ನನ್ನ ಶಾಪ ವಿಮೋಚನೆಗೆ ಸಹಾಯ ಮಾಡಿದ ನಿನಗೆ ಏನಾದರು ಸಹಾಯ ಮಾಡ ಬೇಕೆನಿಸುತ್ತಿದೆ, ಹೇಳು ನಿನಗೆ ಏನು ಬೇಕು” ಎಂದ ಋಷಿ ಮಾತು ಕೇಳಿ, ರಾಜಕುಮಾರ ತಾನು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟಿರುವ ವಿಷಯವನ್ನು ತಿಳಿಸುತ್ತಾನೆ. ಆಗ ಋಷಿ, ನಾನೊಂದು ಮುಲಾಮನ್ನು ಕೊಡುತ್ತೇನೆ ಪ್ರತಿಬಾರಿ ನೀನು ಮಿಂಚಿನೊಳಗೆ ಕೈ ಹಾಕುವ ಮೊದಲು ಈ ಮುಲಾಮನ್ನು ಕೈಗೆ ಹಚ್ಚಿಕೋ, ಆಗ ನಿಂಗೆ ಮಿಂಚಿನ ಬಿಸಿ ತಾಕುವುದಿಲ್ಲ, ಎಂದು ಹೇಳಿ ಮಿಂಚಿನ ರಾಣಿಯೊಡನೆ ನಿನ್ನ ಮದುವೆ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿ ಹೊರಡುತ್ತಾನೆ.

ಮುಲಾಮನ್ನು ಪಡೆದ ರಾಜಕುಮಾರ ತನ್ನ ಪ್ರಯಾಣ ಮುಂದುವರೆಸುತ್ತಾನೆ. ಕೊನೆಯ ಪರ್ವತದ ತುದಿಯನ್ನೇರಿ, ಮುಲಾಮನ್ನು ತನ್ನ ಕೈಗೆ ಹಚ್ಚಿಕೊಂಡು ಮಿಂಚಿನೊಳಗೆ ಕೈ ಹಾಕಿದಾಗ, ಕೈಗೊಂದು ದಾರದ ಉಂಡೆ ಸಿಕ್ಕಿತು. ಹಲವಾರು ಬಾರಿ ಹೀಗೆ ಮಾಡಿ ಸಾಕಷ್ಟು ದಾರದ ಉಂಡೆ ಸಂಗ್ರಹಿಸಿ, ನಂತರ ಅಲ್ಲಿಯೇ ಇದ್ದ ಮರದ ಸಹಾಯದಿಂದ ಒಂದು ಮಗ್ಗವನ್ನು ತಯಾರಿಸಿ, ಹಗಲು ರಾತ್ರಿ ಮಗ್ಗ ನೇಯ್ದು ಒಂದು ಸುಂದರವಾದ ಸೀರೆಯನ್ನು ತಯಾರಿಸುತ್ತಾನೆ. ಆಗ ಆಗಸದಿಂದ ಮಿಂಚಿನ ರಾಣಿ ಪ್ರತ್ಯಕ್ಷಳಾಗಿ, ಈ ಮೋಹಕವಾದ ಸೀರೆಯನ್ನು ನನಗೆ ಕೊಡುವೆಯಾ ಎಂದು ಕೇಳುತ್ತಾಳೆ. ಆಕೆಯ ರೂಪಕ್ಕೆ ಮರುಳಾದ ರಾಜಕುಮಾರ ‘ನನ್ನನ್ನು ವರಿಸುವುದಾದರೆ ಈ ಸೀರೆ ನಿನ್ನದು’ ಎನ್ನುತ್ತಾನೆ. ಅದಕ್ಕೆ ಒಪ್ಪಿಗೆಯಿತ್ತು ಮಿಂಚಿನ ರಾಣಿ ರಾಜಕುಮಾರನನ್ನು ಮದುವೆಯಾಗುತ್ತಾಳೆ.

ಕಪ್ಪೆ ರಾಜಕುಮಾರಿಯ ಕತೆ

January 13, 2009 balaglobal 5 comments

68991_tree_new.jpg

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮೂರು ಗಂಡು ಮಕ್ಕಳು. ರಾಜಕುಮಾರರು ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಮದುವೇ ಮಾಡಲು ರಾಜ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಮೂರೂ ರಾಜಕುಮಾರರಿಗೂ ಒಂದೊಂದು ಬಿಲ್ಲು ಬಾಣ ಕೊಟ್ಟು, ಯಾರು ಯಾರ ಮನೆಗೆ ಬಾಣವನ್ನು ಕಳಿಸುತ್ತಾರೊ ಅವರ ಮನೆಯಿಂದ ಹೆಣ್ಣನ್ನು ತಂದು ಮದುವೆ ಮಾಡಲಾಗುವುದು ಎಂದು ಹೇಳುತ್ತಾನೆ.

ಮೊದಲನೇ ರಾಜಕುಮಾರ ಅಗಸರ ಮನೆಗೆ ಬಾಣ ಕಳಿಸುತ್ತಾನೆ. ಸರಿ ಅವನಿಗೆ ಅಗಸರ ಮಗಳೊಡನೆ ಮದುವೆ ಅಗುತ್ತದೆ. ಎರಡನೇ ರಾಜಕುಮಾರ ಕುಂಬಾರನ ಮನೆಗೆ ಬಾಣ ಕಳಿಸುತ್ತಾನೆ. ಅವನಿಗೆ ಕುಂಬಾರನ ಮಗಳೊಡನೆ ಮದುವೆ ಆಗುತ್ತದೆ. ಕಿರಿಯ ರಾಜಕುಮಾರ ಕಪ್ಪೆ ಮನೆಗೆ ಬಾಣ ಕಳಿಸುತ್ತಾನೆ. ರಾಜ ಆಡಿದ ಮಾತಿನಂತೆ, ಕೊನೆಯವನಿಗೆ ಕಪ್ಪೆಯ ಮಗಳೊಡನೆ ಮದುವೆ ಮಾಡುತ್ತಾನೆ. ಕಿರಿಯ ರಾಜಕುಮಾರ ಕಪ್ಪ್ದೆಗಾಗಿ ಒಂದು ಗೂಡನ್ನು ಕಟ್ಟಿ ಅಲ್ಲಿ ಕಪ್ಪೆ ವಾಸಿಸುವಂತೆ ಎರ್ಪಾಡು ಮಾಡುತ್ತಾನೆ.

ಒಮ್ಮೆ ರಾಜ ತನ್ನ ಮೂರು ಪುತ್ರರನ್ನು ಕರೆದು ನಾಳೆ ನೀವೆಲ್ಲರೂ ನಿಮ್ಮ ಹೆಂಡತಿಯರಿಂದ ಒಂದು ಮಗುವಿನ ಉಡುಗೆಯನ್ನು ತಯಾರಿಸಿಕೊಂಡು ಬರಬೇಕು ಎಂದು ಅಪ್ಪಣೆಯಿತ್ತ. ಅಗಸ ಮತ್ತು ಕುಂಬಾರನ ಮಗಳು ಹೇಗೊ ತಮಗೆ ತಿಳಿದ ಹಾಗೆ ಉಡುಗೆಯನ್ನು  ತಯಾರಿಸಿದರು. ಕಿರಿಯ ರಾಜಕುಮಾರ ತನ್ನ ಮನೆಗೆ ಬಂದು ಅಳುತ್ತಾ ಕುಳಿತ. ಆಗ ಕಪ್ಪೆ ತನ್ನ ಗೂಡಿನಿಂದ ಹೊರಬಂದು ಯಾಕೆ ಅಳುತಿದ್ದೀಯಾ ಎಂದು ಕೇಳಿತು. ಅದಕ್ಕೆ ರಾಜಕುಮಾರ, ಅಪ್ಪ ಹೇಳಿದ್ದಾರೆ ನಿನ್ನ ಕೈಯಿಂದ ಮಕ್ಕಳ ಉಡುಪನ್ನು ತಯಾರಿಸಿಕೊಂಡು ಬರಬೇಕು ಎಂದು, ಆದರೆ ನೀನೊ ಕಪ್ಪೆ ನೀನು ಹೇಗೆ ಉಡುಪನ್ನು ತಯಾರಿಸಬಲ್ಲೆ ಎಂದು ಮತ್ತೆ ಅಳತೊಡಗಿದ. ಆಗ ಕಪ್ಪೆ ಅದಕ್ಯಾಕೆ ಅಳುತ್ತೀಯಾ, ನನಗೆ ಉಡುಗೆ ತಯಾರಿಸುವ ವಿಧಾನ ಗೊತ್ತು ಎಂದು ಹೇಳಿ ತನ್ನ ಗೂಡಿಗೆ ಹೊಗಿ ಹೊರಬರುವಾಗ ಒಂದು ಸುಂದರ ಉಡುಗೆಯನ್ನು ತಂದು ಕಪ್ಪೆ ರಾಜಕುಮಾರನಿಗೆ ನೀಡಿತು. ರಾಜಕುಮಾರನಿಗೆ ಆಶ್ಚರ್ಯವೊ ಆಶ್ಚರ್ಯ. ಸಂತೋಷದಿಂದ ನಾಳೆ ಆಸ್ತಾನಕ್ಕೆ ಉಡುಗೆಯನ್ನು ಕೊಂಡೊಯುತ್ತಾನೆ. ರಾಜ ಮೊದಲಿಗೆ ಅಗಸನ ಮಗಳ ಉಡುಗೆ ನೋಡುತ್ತಾನೆ, ಅಷ್ಟೇನೂ ನಯಗಾರಿಕೆಯಿಲ್ಲದ ಉಡುಗೆ ಎಂದು ತಿರಸ್ಕರಿಸುತ್ತಾನೆ. ನಂತರ ಕುಂಬಾರನ ಮಗಳ ಉಡುಗೆಯನ್ನು ಕೂಡ ತಿರಸ್ಕರಿಸುತ್ತಾನೆ. ಕಿರಿಯ ರಾಜಕುಮಾರ ಉಡುಗೆಯನ್ನು ತೋರಿದಾಗ ರಾಜನ ಕಣ್ಣುಗಳು ಅಗಲವಾಗಿ, ವಾಹ್ ಎಂಬ ಉದ್ಗಾರದೊಂದಿಗೆ ಕಿರಿಯ ಮಗನನ್ನು ಆಲಂಗಿಸಿ ಕಪ್ಪೆ ತಯಾರಿಸಿದ ಉಡುಗೆ ಅತ್ಯುತ್ತಮವಾದುದೆಂದು ಬಹುಮಾನವನ್ನು ಕೊಡುತ್ತಾನೆ.

Read more…

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ

December 17, 2008 balaglobal 2 comments

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೊಳ| ಭೂಮಿತಾಯ
ಎದ್ದೊಂದು ಗಳಿಗೇ ನೆನೆದೇನಾ||

ಕಲ್ಲು ಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ | ಆ ಮನೆಗೆ
ಮಲ್ಲಿಗೆ ಮುಡಿಯೊ ಸೊಸೆ ಬರಲಿ||

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ
ಜಲ್ಲ ಜಲ್ಲನೆ ಉದುರಮ್ಮ| ನಾನಿನಗೆ
ಬೆಲ್ಲದಾರತಿಯಾ ಬೆಳಗೇನಾ||

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಕಲ್ಲು ಕಾವೇರಿ ಕಪನೀಯಾ| ನೆನೆದರೆ
ಹೊತ್ತಿದ್ದ ಪಾಪ ಪರಿಹಾರ||

ಧರಣಿ ಮಂಡಲ ಮಧ್ಯದೊಳಗೆ

December 17, 2008 balaglobal 4 comments

ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ಬರುವ ಗೋವಿನ ಹಾಡನ್ನು ಯಥಾವತ್ತಾಗಿ ಕೆಳಗೆ ಕೊಟ್ಟಿದ್ದೇನೆ. ಪೂರ್ತಿ ಹಾಡಿಗೆ ಇಲ್ಲಿ ಕ್ಲಿಕ್ಕಿಸಿ.


ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೋಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು 
ಬಳಿಗೆ ಕರೆದನು ಹರುಶದಿ
 
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

     ||ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು||

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಶದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

     ||ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು||

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

     ||ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು||

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

     ||ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು||

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾದಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

ಈವನು ಸೌಭಾಗ್ಯ ಸಂಪದ
ಭಾವ ಜಾತಿಪ ಕೃಷ್ಣನು

ಯುಕ್ರೇನಿನ ಜಾನಪದ ಕಥೆ

November 22, 2008 balaglobal Leave a comment

ಬಾಲವನದ ಮಿತ್ರನಾದ ವಿಪಿನ , ಯುಕ್ರೇನಿನ ಜಾನಪದ ಕಥೆಯನ್ನಾದರಿಸಿ, ತನ್ನದೇ ಶೈಲಿಯಲ್ಲಿ ಹೇಳಿರುವ ಕಥೆಯನ್ನು ಓದಿ…

ಒಬ್ಬ ವರ್ತಕನ ಬಳಿ ಏಳುನೂರು ವರಹಗಳಿದ್ದವು. ಅವನು ತುರ್ತಾಗಿ ಯಾವುದೋ ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಯಿತು. ಆ ಏಳು ನೂರು ವರಹಗಳನ್ನು ಅವನು ಒಬ್ಬ ನಂಬಿಕಸ್ಥನ ಬಳಿ ಬಿಟ್ಟುಹೋದ. ಅವನು ಹಿಂದಿರುಗಿದಾಗ ಅವನ ಸ್ನೇಹಿತ ಅವನು ತನಗೆ ಹಣ ಕೊಡಲೇ ಇಲ್ಲ ಎಂದು ವಾದಿಸಿದ. ಅವರು ನ್ಯಾಯಕ್ಕಾಗಿ ನ್ಯಾಯಾಧೀಶರ ಬಳಿ ಹೋದರು. ನ್ಯಾಯಾಧೀಶರು ಇಬ್ಬರಿಗೂ ಮೂರು (3)ಪ್ರಶ್ನೆಗಳನ್ನು ಕೇಳಿದರು.
1. ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸೋದು ಯಾವುದು?
2. ಎಲ್ಲಕ್ಕಿಂತ ವೇಗವಾಗಿ ಓಡುವುದು ಯಾವುದು?
3. ಎಲ್ಲಕ್ಕಿಂತ ಸುಖ ನೀಡುವುದು ಯಾವುದು?

ಇಬ್ಬರೂ ಮನೆಗೆ ಹೋದರು. ವರ್ತಕ ಎಷ್ಟು ಯೋಚಿಸಿದರೂ ಇವುಗಳ ಸರಿಯಾದ ಉತ್ತರ ತಿಳಿಯಲಿಲ್ಲ. ಆಗ ಅವನ ಮಗಳು ಅವೆಲ್ಲದಕ್ಕೂ ಸಮಾಧಾನಕರ ಉತ್ತರವನ್ನು ಹೇಳಿಕೊಟ್ಟಳು.

ಮರುದಿನ ವರ್ತಕ ಹಾಗೂ ಅವನ ಸ್ನೇಹಿತ ನ್ಯಾಯಾಧೀಶರಲ್ಲಿಗೆ ಹೋದರು. ವರ್ತಕನ ಸ್ನೇಹಿತ ಹೆಚ್ಚು ಹೊಟ್ಟೆ ತುಂಬಿಸುವುದು ಹಂದಿ ಮಾಂಸ, ಹೆಚ್ಚು ವೇಗವಾಗಿ ಓಡೋದು ಬೇಟೆನಾಯಿಗಳು, ಹೆಚ್ಚು ಸುಖ ನೀಡುವುದು ಹಣ ಎಂದು ಹೇಳಿದನು. ಬದಲಾಗಿ ವರ್ತಕನು ಹೆಚ್ಚು ಹೊಟ್ಟೆ ತುಂಬಿಸೋದು ಭೂಮಿತಾಯಿ, ಹೆಚ್ಚು ವೇಗವಾಗಿ ಓಡೋದು ಮನಸ್ಸು, ಹೆಚ್ಚು ಸುಖ ಕೊಡುವುದು ನಿದ್ದೆ ಎಂದು ಹೇಳಿದನು.

ಇಬ್ಬರ ಉತ್ತರಗಳನ್ನು ಗಮನವಿಟ್ಟು ಕೇಳಿದ ನ್ಯಾಯಾಧೀಶರು ವರ್ತಕನೇ ಆ ಹಣದ ಒಡೆಯ ಎಂದು ನಿರ್ಧರಿಸಿದರು. ಏಕೆಂದರೆ ಇಬ್ಬರ ಉತ್ತರಗಳಿಂದ ಅವರಿಗೆ ಹಣಕ್ಕಾಗಿ ಸುಳ್ಳು ಹೇಳುವ ಸ್ವಭಾವ ಅವರಿಬ್ಬರಲ್ಲಿ ವರ್ತಕನ ಬದಲಾಗಿ ಅವನ ಸ್ನೇಹಿತನದೇ ಇರುವ ಸಾಧ್ಯತೆ ಹೆಚ್ಚು ಎಂದು ಅರ್ಥವಾಯಿತು.