ಜೋಗುಳದ ಪದಗಳು
ಹಾವಿನ ಹೆಡೆ ಚಂದ ಮಾವಿನ ಮಿಡಿ ಚೆಂದ
ಹಾರಡಿ ಬರುವ ಗಿಣಿ ಚಂದ ಕಂದಯ್ಯ
ನೀ ಚಂದ ನಮ್ಮ ಮನೆಗೆಲ್ಲ
ತೊಟ್ಟೀಲದಾಗೊಂದು ತೊಳೆದ ಮುತ್ತನು ಕಂಡೆ
ಹೊಟ್ಟೆ ಮೇಲಾಗಿ ಮಲಗ್ಯಾನ ಕಂದಯ್ಯಗೆ
ಮುತ್ತೀನ ದೃಷ್ಟಿ ತೆಗೆದೇನ
ಅಂಗೀಯ ತೊಟ್ಟರೆ ರಂಗನಾ ಸರಿಯೆಂಬೆ
ಚುಂಗುಬಿಟ್ಟರೆ ನವಿಲೆಂಬೆ ಕೃಷ್ಣಯ್ಯ
ಶೃಂಗಾರವಾಗೆ ದೊರೆಯೆಂಬೆ
ಹಾಲ್ಬೇಡಿ ಹರಿದತ್ತ ನೀರ್ಬೇಡಿ ನಿಂತತ್ತ
ಮೊಸರ್ಬೇಡಿ ಕೆಸರು ತುಳಿದತ್ತ ಕೃಷ್ಣೈಯ
ಹಸುರಂಗಿ ಬೇಡಿ ಹಸಿದನು
ಹಸುಮಗು ಚಿನ್ನವೆ ಮಿಸುನಿ ಹೊಂಬಣ್ಣವೆ
ಬಸುರಿಯರ ಹಣೆಯ ತಿಲಕವೆ ನನ್ನಯ್ಯ
ಹೊಸ ಮುತ್ತು ಹೊನ್ನ ಕಲಶವೆ
ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ
ಮಾಣಿಕ್ಯದಂಥ ಮಗ ಮುಂದೆ ಮಲಗಿರಲು
ಮಾರಾಯ್ರ ಗೊಡವಿ ನನಗೇನ
ಮಕ್ಕಳ ತಾಯವ್ವ ಕೆಟ್ಟೆನೆನ್ನಲು ಬೇಡ
ಪಕ್ಷಿ ಜಾತ್ಯಾಗೆ ಗರುಡನು ತನ್ನವ್ವನ
ಹುಟ್ಟಿದ ಸೆರೆಯ ಬಿಡಿಸ್ಯಾನು
ಜನಕ ರಾಯನ ಮಗಳು ವನಕೆ ತೊಟ್ಟಿಲ ಕಟ್ಟಿ
ಕುಶಲವರನಿಟ್ಟು ತೂಗ್ಯಾಳು ಸೀತಾದೇವಿ
ನಗುತ ವನವಾಸ ಕಳೆದಾಳು
ಬಡತನ ನನಗಿರಲಿ ಬಹಳ ಮಕ್ಕಳಿರಲಿ
ಮೇಲೆ ಗುರುವಿನ ದಯೆಯಿರಲಿ ನನ ಗುರುವೆ
ಬಡತನದ ಚಿಂತೆ ನಿನಗಿರಲಿ